ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲೂ ಮೂಲ ಸಂಪ್ರದಾಯವನ್ನು ನಾವು ಬಿಡುವಂತಿಲ್ಲ. ಶ್ರಾವಣ ಮಾಸದ ಎರಡನೇ ಶುಕ್ರವಾರವಾದ ಇಂದು ರಾಜ್ಯಾದ್ಯಂತ ವರಮಹಾಲಕ್ಷ್ಮಿ ಪೂಜೆಯ ಸಡಗರ ಮನೆ ಮಾಡಿದೆ. ಬಡವರ ಭಾಗ್ಯ ನಿಧಿ ವರಮಹಾಲಕ್ಷ್ಮೀ ವ್ರತದ ಪೂಜಾ ವಿಧಾನದ ಕುರಿತು ತಿಳಿದುಕೊಳ್ಳೋಣ..
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಲಕ್ಷ್ಮೀ ವ್ರತವನ್ನು ಆಚರಿಸುವುದು ಪ್ರತೀತಿ. ಈ ವ್ರತ ಅತ್ಯಂತ ಪ್ರಭಾವಶಾಲಿ ಮತ್ತು ವರಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಬಡತನ, ದುಃಖ, ಮನಸ್ತಾಪಗಳು ದೂರವಾಗಿ ಶಾಂತಿ ನೆಲೆಸುತ್ತದೆ ಎಂದು ಪುರಾಣಗಳು ಹೇಳುತ್ತವೆ. ಜೊತೆಗೆ ಸಂತಾನವಿಲ್ಲದ ದಂಪತಿ ಈ ಪೂಜೆ ಮಾಡುವುದರಿಂದ ಸಂತಾನ ಭಾಗ್ಯಯೂ ದೊರೆಯುತ್ತದೆ ಎಂಬ ನಂಬಿಕೆಯೂ ಇದೆ.
ಈ ವ್ರತವನ್ನು ಯಾರು ಮಾಡಬೇಕು?:
ಇದು ಭಗವಾನ್ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬ. ಈ ವ್ರತ ಕುಮಾರಿಯರಿಗಲ್ಲ, ಇದನ್ನು ವಿವಾಹಿತ ಮಹಿಳೆಯರು ಮಾತ್ರ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ವ್ರತವನ್ನು ಬಹಳ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರ ಫಲಾಪಲಗಳನ್ನು ಅರಿತ ಮೇಲೆ ಉತ್ತರ ಭಾರತದ ಜನರೂ ಇದನ್ನು ಆಚರಿಸತೊಡಗಿದ್ದಾರೆ.
ಪೂಜೆ ಮಾಡುವ ವಿಧಾನ ಹೀಗಿದೆ..
ಅಷ್ಟೈಶ್ವರ್ಯ ಪ್ರಧಾಯಿನಿ ವರಮಹಾಲಕ್ಷ್ಮಿ ಪೂಜೆಯನ್ನು ನೀವು ಬಹಳ ಸರಳವಾಗಿ ಮಾಡಬಹುದು. ಈ ಹಬ್ಬದ ಸಮಯದಲ್ಲಿ ಮಹಿಳೆಯರು ವಿಶೇಷವಾಗಿ ಉಪವಾಸ ವ್ರತ ಕೈಗೊಂಡು ಮಹಾಲಕ್ಷ್ಮಿಗೆ ಭಕ್ತಿ ಅರ್ಪಿಸುತ್ತಾರೆ. ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಸೀರೆ, ಆಭರಣ, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿ, ನಂತರ ಸಂಜೆ ಸಮಯದಲ್ಲಿ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡಲಾಗುತ್ತದೆ. ಅಷ್ಟೇ ಅಲ್ಲದೆ ಹಬ್ಬದ ವಿಶೇಷವಾಗಿ ಬಗರ ಬಗೆಯ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ವ್ರತ ಆಚರಿಸುವುದರಿಂದ ಅಷ್ಟ ಲಕ್ಷ್ಮಿ ಕೃಪೆ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.