ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ದೇಶದ ಐಟಿ ಕ್ಷೇತ್ರ 1 ಟ್ರಿಲಿಯನ್ ಡಾಲರ್ ಮಾರ್ಕೆಟ್ ಗುರಿ ಮುಟ್ಟಿದಾಗ, ಅದರಲ್ಲಿ ಶೇ.40 ರಷ್ಟು ಪಾಲು ಕರ್ನಾಟಕದ್ದೇ ಇರಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಐಟಿ, ಬಿಟಿ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಐಟಿ, ಬಿಟಿಯಲ್ಲಿ ಹಿಡಿತ ಸಾಧಿಸಲು ಪ್ರತಿ ರಾಜ್ಯ, ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಕಾನೂನಿನಲ್ಲಿ ಬದಲಾವಣೆ ಸೇರಿದಂತೆ ಹಲವು ಸುಧಾರಣೆ ತರಲು ಸರ್ಕಾರದ ಹಾಗೂ ನಮ್ಮ ಐಟಿ, ಬಿಟಿ ಇಲಾಖೆ ಸಜ್ಜಾಗಿದೆ ಎಂದರು.
ಇನ್ನು, ಇನೋವೇಷನ್ ಅಥಾರಿಟಿ ಕಾರ್ಯರೂಪಕ್ಕೆ ತರಲು ಕರ್ನಾಟಕ ಮುನ್ನುಡಿ ಬರೆಯುತ್ತಿದೆ. ಅದರ ಹೆಗ್ಗಳಿಕೆ ಕೂಡ ನಮ್ಮ ಕರ್ನಾಟಕ ಸರ್ಕಾರದ್ದು. ಸ್ಟಾರ್ಟ್ ಅಪ್, ಐಟಿ ಕಾಯ್ದೆಯಲ್ಲಿ ಬದಲಾವಣೆ ತರುವ ಪ್ರಯತ್ನ ಕೂಡ ನಮ್ಮದೇ. ಡಿಜಿಟಲ್ ಎಕಾನಮಿ ಶೇ.20 ಇದ್ದು, ಹೊಸ ಆವಿಷ್ಕಾರ ರೂಪಿಸಲು ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಇಂದು ಐಟಿ, ಬಿಟಿಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಅದನ್ನ ಇನ್ನಷ್ಟು ಮುಂದುವರಿಸಲು ಚಿಂತನೆ ನಡೆದಿದೆ. ಶೇ.40 ರಷ್ಟು ಪ್ರಮಾಣದಲ್ಲಿ ಈಗ ಐಟಿಬಿಟಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದ್ದು, ಸ್ಥಳೀಯರಿಗೇ ಉದ್ಯೋಗವಕಾಶ ನೀಡಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ನವೆಂಬರ್ನಲ್ಲಿ ಟೆಕ್ ಸಮ್ಮೇಳನ: ನವೆಂಬರ್ 18ರಿಂದ 20ರವರೆಗೆ ಬೆಂಗಳೂರು ತಂತ್ರಜ್ಞಾನ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಅದಕ್ಕಾಗಿ ರಾಜ್ಯದ ಹಲವೆಡೆ ರೋಡ್ ಶೋ ನಡೆಸಲಾಗುವುದು. ದೆಹಲಿಯಲ್ಲಿ ಅಕ್ಟೋಬರ್ 4ರಂದು ರೋಡ್ ಶೋ ನಡೆಯಲಿದೆ. ಈ ಸಮ್ಮೇಳನ ಹಿನ್ನೆಲೆಯಲ್ಲಿ ಟ್ಯಾಲೆಂಟ್ ಎಕ್ಸಲೇಟರ್ ಕಾರ್ಯಕ್ರಮ ಹೆಚ್ಚಿಸಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ್ ಇದೇ ಸಂದರ್ಭದಲ್ಲಿ ತಿಳಿಸಿದರು.