ಬೆಂಗಳೂರು: ಇಂದು ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಘೋಷಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಹೊಸದಾಗಿ 7 ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ಘೋಷಿಸಲಾಗಿದೆ.
ಎನ್ಇಪಿ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣದಲ್ಲೂ ಜಾರಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 1,230 ಶಾಲಾ ಕೊಠಡಿಗಳ ನಿರ್ಮಾಣ ಮತ್ತು ದುರಸ್ತಿಗೊಂಡಿರುವ 2,777 ಕೊಠಡಿಗಳ ಅಭಿವೃದ್ಧಿಗಳ ಕ್ರಮಕ್ಕೆ ನಿರ್ಧರಿಸಲಾಗಿದೆ. ಜೊತೆಗೆ 15 ಸಾವಿರ ಶಿಕ್ಷಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 180 ಕೋಟಿ ರೂ.ಗಳನ್ನು ನೀಡಲು ಯೋಜಿಸಲಾಗಿದೆ. ಎಲ್ಲಾ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತ್ತು ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಯೋಗ ತರಬೇತಿಗೆ ನಿರ್ಧರಿಸಲಾಗಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಮಕ್ಕಳ ಬಸ್ ಯೋಜನೆಯನ್ನು 100 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದ್ದು, 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿ ಶಿಕ್ಷಣ ಆರೋಗ್ಯ ಮತ್ತು ಪೌಷ್ಠಿಕತೆಗೆ 3,000 ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಉನ್ನತ ದೃಷ್ಟಿಯಿಂದ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭಿಸಲಾಗುವುದು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳಿಂದ ಕಾಲೇಜು ಶುಲ್ಕವನ್ನು ಪಡೆಯದೇ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಇದರ ಪ್ರಯೋಜನವನ್ನು 8 ಲಕ್ಷ ವಿದ್ಯಾರ್ಥಿಗಳು ಪಡೆಯಲಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಸ್ತು: ಜಿಲ್ಲೆಯ ಬಹುಕಾಲದ ಕನಸು ನನಸು
ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಅಡಿ 725 ಕೋಟಿ ರೂ. ಘೋಷಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜಿನಲ್ಲಿ 5,581 ಶೌಚಾಲಯ ನಿರ್ಮಾಣಕ್ಕಾಗಿ 80 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆಗೆ ಯೋಜಿಸಲಾಗಿದೆ. 73 ಕರ್ನಾಟಕ ಪಬ್ಲಿಕ್ ಶಾಲೆ ಮತ್ತು 50 ಆದರ್ಶ ವಿದ್ಯಾಲಯದಲ್ಲಿ 15 ಕೋಟಿ ವೆಚ್ಚದಲ್ಲಿ ಸೃಷ್ಟಿ ಟಿಂಕರಿಂಗ್ ಪ್ರಯೋಗಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ.
ಪಬ್ಲಿಕ್ ಶಾಲೆ ಹೊಂದಿಲ್ಲದ 23 ತಾಲೂಕುಗಳಲ್ಲಿ 46 ಶಾಲೆಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಗ್ರಂಥಾಲಯದ ಬಲವರ್ಧನೆಗಾಗಿ 24,347 ಶಾಲೆಗಳಲ್ಲಿ 20 ಕೋಟಿ ವೆಚ್ಚದಲ್ಲಿ ರೀಡಿಂಗ್ ಕಾರ್ನರ್ ಸ್ಥಾಪನೆಗೆ ನಿರ್ಧರಿಸಲಾಗಿದೆ. ಶಿಗ್ಗಾವ್ನ ಬಂಕಾಪೂರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ ಆಲೋಚಿಸಲಾಗಿದೆ.
ಸಿಇಟಿ ಮೂಲಕ ಸರ್ಕಾರಿ ಕೋಟದಡಿ ಆಯ್ಕೆಯಾದ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಿಕ್ಷಣ ಪೂರೈಸುವ 500 ವಿದ್ಯಾರ್ಥಿಗಳಿಗೆ ಹಳ್ಳಿ ಮುತ್ತು ಯೋಜನೆ ಅಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಶುಲ್ಕ ಭರಿಸಲಾಗುವುದು ಎಂದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಬಜೆಟ್ನಲ್ಲಿ ಪ್ರವಾಸೋದ್ಯಮ.. ರಾಮನಗರದಲ್ಲಿ ರಾಮಮಂದಿರ, ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ..