ಬೆಂಗಳೂರು: ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚಿಸುವ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಕುರಿತು ಪರಿಶೀಲಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿಂದು ಜನಜಾಗೃತಿ ಸಮಿತಿಗೆ ಭರವಸೆ ನೀಡಿದ್ದಾರೆ.
ಜಯಮಹಲ್ ನ ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಹಿಂದುಪರ ಸಂಘಟನೆಗಳ ನಿಯೋಗವು ಲವ್ ಜಿಹಾದ್ ಕುರಿತು ದೂರು ಸಲ್ಲಿಸಿ, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದರೂ ಲವ್ ಜಿಹಾದ್ ಅವ್ಯಾಹತವಾಗಿ ಮುಂದುವರಿದಿದೆ. ಉತ್ತರಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ವಿರೋಧಿ ವಿಶೇಷ ದಳ ರಚಿಸಲು ಹಿಂದು ಜನಜಾಗೃತಿ ಸಮಿತಿ ಇನ್ನಿತರ ಸಂಘಟನೆಗಳು ಆಗ್ರಹಿಸಿದವು.
ರಾಷ್ಟ್ರೀಯ ತನಿಖಾ ದಳದ ವರದಿಯಲ್ಲಿ ಉಲ್ಲೇಖಿಸಿದ ಅಂಶಗಳ ಪ್ರಕಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಶಾಹೀನ್ ಗ್ಯಾಂಗ್ ಸಕ್ರಿಯವಾಗಿದೆ. ಕೆಲವು ಮೌಲ್ವಿಗಳು ಹಾಗೂ ಮದರಸಾಗಳು ಲವ್ ಜಿಹಾದ್ ಗೆ ಸಾಥ್ ನೀಡಿವೆ ಎಂದು ಈ ಮನವಿಯಲ್ಲಿ ಆರೋಪಿಸಿದ್ದಾರೆ.
ಗೃಹ ಸಚಿವರಿಗೆ ಮನವಿ ಸಲ್ಲಿಕೆ: ಮನವಿ ಸ್ವೀಕರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಂದು ಯುವತಿಯರು, ಮಹಿಳೆಯರು ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಲು ಸೂಚಿಸುತ್ತೇನೆ. ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ರಚನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಜತೆಗೆ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಇದನ್ನೂಓದಿ:ಪೊಲೀಸರಿಂದ ಬೆದರಿಕೆ ಆರೋಪ: ಶ್ರೀರಂಗಪಟ್ಟದಲ್ಲಿ ರಾತ್ರಿಯಿಡೀ ಹಿಂದೂ ಕಾರ್ಯಕರ್ತರ ಪ್ರತಿಭಟನೆ