ಬೆಂಗಳೂರು: ಕೋವಿಡ್ ಕಾರಣಕ್ಕೆ ಕಳೆದೆರಡು ವರ್ಷದಿಂದ ನಿಂತು ಹೋಗಿದ್ದ ಅನಕ್ಷರಸ್ಥರ ಕಲಿಕಾ ಕೇಂದ್ರಕ್ಕೆ ಮರು ಚಾಲನೆ ಸಿಕ್ಕಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಲೋಕ ಶಿಕ್ಷಣ ನಿರ್ದೇಶನಾಲಯ ಆಯೋಜಿಸಿದ್ದ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ '55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ/ಸಪ್ತಾಹ 2021' ವೀಡಿಯೋ ಸಂವಾದ ಉದ್ಘಾಟಿಸಿ ಮಾತನಾಡಿ, ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಮಹತ್ವದ ಕಾರ್ಯ ಇದಾಗಿದೆ. ಒಂದು ಹೆಜ್ಜೆ ಮುಂದುವರಿದು ಈ ವರ್ಷದಿಂದ ಅನಕ್ಷರಸ್ಥರು ಇರುವ ಸ್ಥಳದಲ್ಲೇ ಕಲಿಕಾ ಕೇಂದ್ರ ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಕೈಗಾರಿಕೆಗಳು, ಕಾರ್ಖಾನೆಗಳು ಇರುವ ಸ್ಥಳಕ್ಕೇ ಕಲಿಕೆಯನ್ನು ಕೊಂಡೊಯ್ಯುತ್ತೇವೆ ಎಂದರು.
ರಾಜ್ಯದ ಐದು ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಯಾದಗಿರಿ, ವಿಜಯಪುರ ಹಾಗೂ ಚಾಮರಾಜನಗರದಲ್ಲಿ ಆರಂಭಿಕ ಹಂತದಲ್ಲಿ ಕಲಿಕಾ ಕೇಂದ್ರ ಆರಂಭಿಸುತ್ತೇವೆ. ಮಠ ಮಾನ್ಯಗಳು, ಸಂಸ್ಥೆಗಳನ್ನು ಬಳಸಿಕೊಂಡು ಶಿಕ್ಷಿತರ ಸಂಖ್ಯೆ ಹೆಚ್ಚಿಸಲು ಚಿಂತನೆ ನಡೆಸಿದ್ದೇವೆ. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಹಾಗೂ ಅಧಿಕಾರಿಗಳಿಂದ ಸಲಹೆ, ಸೂಚನೆ ಸ್ವೀಕರಿಸುತ್ತಿದ್ದೇವೆ.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅಶಿಕ್ಷಿತರಿದ್ದಾರೆ ಎನ್ನುವುದು ಬೇಸರದ ಸಂಗತಿ. ನಾವು ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾ ವಹಿಸುತ್ತೇವೆ. ಶಾಲೆ ಆರಂಭಿಸುವ ವಿಚಾರದಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿದ್ದೀರಿ, ಈ ಕಾರ್ಯ ಯಶಸ್ವಿಗೂ ಸಹಕರಿಸುತ್ತೀರಾ ಎಂದು ನಿರೀಕ್ಷಿಸುತ್ತೇನೆ ಎಂದರು.
ಸಾಕ್ಷರತೆ, ಅನಕ್ಷರತೆ ಎಂದು ಹೇಳುವ ಸಂದರ್ಭ ಸಚಿವರು ಸಾಕಷ್ಟು ಕಷ್ಟಪಟ್ಟಿದ್ದು ಗೋಚರಿಸಿತು. ಅಕ್ಕ ಪಕ್ಕದಲ್ಲಿ ಕುಳಿತ ಅಧಿಕಾರಿಗಳು ಒಂದಿಷ್ಟು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದರೂ, ಸಚಿವರಿಂದ ಸ್ಪಷ್ಟ ಉಚ್ಛಾರ ಸಾಧ್ಯವಾಗಲಿಲ್ಲ. ಕೊನೆಗೂ ಸಾಕ್ಷರತಾ ಮಿಷನ್ ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ. ನಾಗೇಶ್ ಸಾಕ್ಷರತೆ, ಅನಕ್ಷರತೆ ಶಬ್ಧ ಉಚ್ಚಾರಣೆ ಮಾಡಲು ಒದ್ದಾಡಿದ್ದು ಕಂಡುಬಂತು.
ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಸುಷಮಾ ಗೋಡಬೋಲೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಚಿವರು ಬಾಳಿಗೆ ಬೆಳಕು ಪ್ರಾಥಮಿಕೆ ಮತ್ತು ಬರೆಯೋಣ ಬನ್ನಿ ಅಭ್ಯಾಸ ಪುಸ್ತಕ ಬಿಡುಗಡೆ ಮಾಡಿದರು. ಬೋಧನಾ ಕಲಿಕಾ ಸಾಮಗ್ರಿಗಳನ್ನು ಅರ್ಪಣೆ ಮಾಡಿದರು. ಪಡನಾ-ಲಿಖನಾ ಅಭಿಯಾನ ಹಾಗೂ 2021- 22 ನೇ ಸಾಲಿನ ಜಿಲ್ಲಾವಲಯ ಲಿಂಕ್ ಅನುದಾನ ಸಾಕ್ಷರತಾ ಕಾರ್ಯಕ್ರಮಗಳ ಕಲಿಕಾ ಕೇಂದ್ರವನ್ನೂ ಸಚಿವರು ಇದೇ ಸಂದರ್ಭ ಉದ್ಘಾಟಿಸಿದರು.