ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ರಶ್ಮಿ ಮಹೇಶ್ ಅವರನ್ನ ಬಹುಕೋಟಿ ಐಎಂಎ ವಂಚನೆ ಕೇಸ್ಗೆ ಸಂಬಂಧಿಸಿದಂತೆ ವಿಶೇಷ ಬೆಂಗಳೂರು ಪ್ರಾದೇಶಿಕ ಆಯುಕ್ತೆಯಾಗಿ ನೇಮಕ ಮಾಡಿತ್ತು. ಆದರೆ, ರಶ್ಮಿಯವರನ್ನ ಬಿಜೆಪಿ ಸರ್ಕಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆ.
ಐಎಂಎ ಪ್ರಕರಣದಲ್ಲಿ ನಗರದ ಡಿಸಿ ವಿಜಯ್ ಶಂಕರ್ ಮನ್ಸೂರ್ಗೆ ಅನುಕೂಲವಾಗುವಂತೆ ವರದಿ ನೀಡಿದ್ದರು ಎಂಬ ಆರೋಪವಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ವಿಜಯ್ ಶಂಕರ್ ಅವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದರು. ನಂತರ ಹೈಕೋರ್ಟ್ ಸೂಚನೆ ಮೇರೆಗೆ ಜುಲೈ 24ರಂದು ರಶ್ಮಿ ಅವರನ್ನು ನೇಮಕ ಮಾಡಲಾಗಿತ್ತು. ಆ ಬಳಿಕ ಐಎಂಎ ಕೇಸ್ ಗೆ ಸಂಬಂಧಿಸಿದ ಎಲ್ಲಾ ಪವರ್ ರಶ್ಮಿ ಅವರಿಗೆ ನೀಡಿ, ಪಿಐಡಿ ಕಾಯ್ದೆಯಡಿ ಕಾರ್ಯ ನಿವರ್ಹಿಸುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.
ಈ ವೇಳೆ ಐಎಂಎ ಕೇಸ್ ತನಿಖೆಗೆ ಕೈ ಜೋಡಿಸಿ ತನಿಖೆಗೆ ಇಳಿದಾಗ ಮನ್ಸೂರ್ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಯ ಮುಂದಾಳತ್ವ ಪಡೆದಿದ್ರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ ಮಾಡಿ, ಒಟ್ಟು 26 ಕಡೆ 279 ಕೋಟಿ ರೂ.ಆಸ್ತಿ ಪಾಸ್ತಿ ಜಪ್ತಿಗೆ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆದರೆ, ತನಿಖೆ ಚುರುಕು ಪಡೆಯುತ್ತಿದ್ದಂತೆ ಕೇವಲ 21 ದಿನದಲ್ಲಿ ಏಕಾಏಕಿ ವರ್ಗಾವಣೆ ಮಾಡಿದ್ದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.