ಬೆಂಗಳೂರು : ಪಿಟಿಸಿಎಲ್ ತಿದ್ದುಪಡಿ ಕಾಯ್ದೆ 2023, ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ 2023ರನ್ನು ಸದನದಲ್ಲಿ ಮಂಡಿಸಲು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸೌಧದಲ್ಲಿ ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ವಿಧೇಯಕ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಜನರ ಜಮೀನು ಖರೀದಿಗೆ ನಿರ್ಬಂಧ ಹಾಕುವ ವಿಧೇಯಕದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ದಲಿತರಿಗೆ ಸರ್ಕಾರ ಮಂಜೂರು ಮಾಡಿದ ಜಮೀನು ಅವರಲ್ಲಿ ಉಳಿಸಲು ಹಾಗೂ ಅಕ್ರಮ ಪರಭಾರೆ ಆಗಿದ್ದನ್ನು ಯಾವುದೇ ಕಾಲಮಿತಿ ಇಲ್ಲದೆ ಮರುವಶಪಡಿಸಿಕೊಳ್ಳಲು ಪಿಟಿಸಿಎಲ್ ಕಾಯ್ದೆಗೆ (ಕೆಲ ಜಮೀನುಗಳ ಪರಭಾರೆ ನಿಷೇಧ) ತಿದ್ದುಪಡಿ ಮಾಡಲು ಒಪ್ಪಿಗೆ ಪಡೆಯಲಾಗಿದೆ.
ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ಕೋರಿದ ಪ್ರಕರಣಗಳು ಹೈಕೋರ್ಟ್ನಲ್ಲಿ ಪೆಂಡಿಂಗ್ ಇದೆ. ಇದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಒಂದು ಕೋಟಿ ರೂ ವರೆಗೆ ಪರಿಹಾರ ಕೇಳಿದ ಅಪಘಾತ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳಿಗೆ ವರ್ಗಾಯಿಸಲು ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ತರಲು ಸಭೆ ಒಪ್ಪಿದೆ. ಇಂತಹ ಎರಡು ಲಕ್ಷ ಪ್ರಕರಣಗಳು ಜಿಲ್ಲಾ ಕೋರ್ಟಿಗೆ ವರ್ಗಾವಣೆ ಆಗುತ್ತದೆ. ಈ ಎರಡು ತಿದ್ದುಪಡಿ ಮಸೂದೆಗಳನ್ನು ಇದೇ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಕೋವಿಡ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ವಿಚಾರ : ಕೋವಿಡ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ವೇಳೆ ಆರೋಗ್ಯ ಇಲಾಖೆಯಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಕುರಿತು ಶಾಸಕ ಪ್ರದೀಪ್ ಈಶ್ವರ್ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ತನಿಖೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಕೋವಿಡ್ ಖರೀದಿ ವಿಚಾರವಾಗಿ ಮಹಾಲೇಖಪಾಲ ವರದಿಯಲ್ಲಿ ಅನೇಕ ವಿಚಾರಗಳು ಪ್ರಸ್ತಾಪ ಆಗಿದೆ. ವರದಿ ಸದನದಲ್ಲಿ ಮಂಡನೆ ಕೂಡ ಆಗಿದೆ. ಕೆಲವು ಆರ್.ಟಿ.ಐ ಕಾರ್ಯಕರ್ತರು ಕೂಡ ಹಲವು ಮಾಹಿತಿಗಳನ್ನು ಇಲಾಖೆಗೆ ಒದಗಿಸಿದ್ದಾರೆ. ಇದರ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿಯೂ ಕೂಡ ನಮ್ಮ ಮುಂದಿದೆ ಎಂದರು.
ಕೋವಿಡ್ ಅಕ್ರಮಗಳ ಬಗ್ಗೆ ತನಿಖೆಯ ಅಗತ್ಯ ಸರ್ಕಾರ ಮನಗಂಡಿದೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ತನಿಖೆಯಲ್ಲಿ ಕಂಡುಬರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿಯೂ ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.
ಗಮನ ಸೆಳೆಯುವ ಸೂಚನೆ ವೇಳೆ ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಾತನಾಡಿ, ಬಿಬಿಎಂಪಿ ಕಾಮಗಾರಿಗಳ ಅನುದಾನ ತಡೆ ಹಿಡಿದಿರುವ ಬಗ್ಗೆ ಪ್ರಶ್ನಿಸಿದರು. ಬಿಬಿಎಂಪಿಯಲ್ಲಿ ಆಗಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರು ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ. ನೈಜತೆ ಬಗ್ಗೆ ಮಾತಾಡಿದ್ದಾರೆ. ನೀವು ಏನ್ ಬೇಕಾದರೂ ತನಿಖೆ ಮಾಡಿಕೊಳ್ಳಿ, ಆದರೆ ಅನುದಾನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅಶ್ವತ್ಥ ನಾರಾಯಣ ಸಾಹೇಬರು, ಕೆಲ ವಿಷಯಗಳನ್ನು ಹೇಳಿದ್ದಾರೆ. ಅದನ್ನು ಗಮನಕ್ಕೆ ತೆಗೆದುಕೊಂಡು ಪರಿಶೀಲನೆ ಮಾಡುತ್ತೇವೆ ಎಂದಷ್ಟೇ ಉತ್ತರಿಸಿದರು. ಡಿಸಿಎಂ ಡಿಕೆಶಿ ಚಿಕ್ಕದಾದ ಉತ್ತರಕ್ಕೆ ನಿರಾಸೆಗೊಂಡ ಬಿಜೆಪಿ ಸದಸ್ಯರು, ಏನು ಈ ರೀತಿ ಉತ್ತರ ಕೊಟ್ಬಿಟ್ರಲ್ಲ ಎಂದು ಡಿಕೆಶಿ ಕಡೆ ನೋಡಿ ಕೈ ಎತ್ತಿ ನಗುತ್ತಾ ಅಶ್ವತ್ಥ ನಾರಾಯಣ, ಶಿವರಾಮ್ ಹೆಬ್ಬಾರ್ ಹಾಗೂ ಸುನೀಲ್ ಕುಮಾರ್ ಕುಳಿತರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಇಲ್ಲಿ 30 ವರ್ಷಗಳಿಂದ ಇಲ್ಲಿ ಇದ್ದೇನೆ. ನನಗೆ ಗೊತ್ತಿಲ್ವಾ, ಯಾವ ರೀತಿ ಉತ್ತರ ಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ : ರೈತರು, ಬಡವರಿಗೆ ತ್ವರಿತ ನ್ಯಾಯ.. ಸರ್ಕಾರಿ ವ್ಯಾಜ್ಯ ನಿರ್ವಹಣೆಗೆ ಹೊಸ ಕಾಯ್ದೆ.. ಸಿವಿಲ್ ಪ್ರಕ್ರಿಯಾ ಸಂಹಿತೆ ವಿಧೇಯಕ ಮಂಡನೆ