ಬೆಂಗಳೂರು: ಕೇಂದ್ರ ಸರ್ಕಾರ ತನ್ನ ನಾಗರಿಕರಿಗೆ ಆಹಾರ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ‘ಒಂದು ರಾಷ್ಟ್ರ ಒಂದು ಪಡಿತರ’ ಯೋಜನೆಗೂ ಕೊರೊನಾ ಮಾರಿ ಕಾಡುತ್ತಿದೆ. ಇದರ ಪರಿಣಾಮವೆಂಬಂತೆ ಯೋಜನೆಯ ಫಲಾನುಭವಿಗಳಾಗಬೇಕಿದ್ದ ವಲಸೆ ಕಾರ್ಮಿಕರು ಇದೀಗ ರಾಜ್ಯ ಬಿಟ್ಟು ಹೋಗಿದ್ದಾರೆ.
ಜನರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ಸಂದರ್ಭದಲ್ಲಿ ಹಸಿವಿನಿಂದ ನರಳಬಾರದು ಮತ್ತು ಆಹಾರ ಪೂರೈಕೆಯಲ್ಲಿರುವ ಭ್ರಷ್ಟಾಚಾರವನ್ನು ತೆಗೆದುಹಾಕಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ‘ಒಂದು ರಾಷ್ಟ್ರ ಒಂದು ಪಡಿತರ’ ಯೋಜನೆ ಜಾರಿ ಮಾಡಿದೆ. ಈ ಯೋಜನೆಯನ್ನು ಮೊದಲಿಗೆ ಕಳೆದ 2019ರ ಆಗಸ್ಟ್ನಲ್ಲಿ ಪ್ರಾಯೋಗಿಕವಾಗಿ ಆಂಧ್ರ-ತೆಲಂಗಾಣ ಮತ್ತು ಮಹಾರಾಷ್ಟ್ರ-ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭಿಸಿತ್ತು. ಇಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡ ಬಳಿಕ ದೇಶದ ಪ್ರಮುಖ ರಾಜ್ಯಗಳಲ್ಲಿ 2020ರ ಜನವರಿ 1 ರಿಂದ ಪ್ರಾರಂಭಿಸಿತ್ತು.
ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಕೇರಳ, ಕರ್ನಾಟಕ, ಹರಿಯಾಣ, ತ್ರಿಪುರ, ಗೋವಾ, ಜಾರ್ಖಂಡ್, ಮಧ್ಯಪ್ರದೇಶ ಸೇರಿದಂತೆ 12 ರಾಜ್ಯಗಳಲ್ಲಿ ಜನವರಿ 1ರಿಂದ ಯೋಜನೆ ಜಾರಿಯಾಗಿದೆ. ಆದರೆ ಮಾಹಿತಿ ಕೊರತೆ, ತಂತ್ರಜ್ಞಾನದ ಅಭಾವ ಮತ್ತು ಅಗತ್ಯ ದಾಖಲೆಗಳ ಕೊರತೆಯಿಂದಾಗಿ ಫಲಾನುಭವಿಗಳಿಗೆ ತಲುಪಲು ತಡವಾಗುತ್ತಿದೆ. ಇದೀಗ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ವಾಪಸ್ಸಾಗಿದ್ದರಿಂದ ಯೋಜನೆ ಜಾರಿ ಸ್ವಲ್ಪ ಮಟ್ಟಿಗೆ ಹಿನ್ನೆಡೆ ಅನುಭವಿಸಿದೆ. ಇದೀಗ ಜೂನ್ 1ರಿಂದ ಇಡೀ ದೇಶಾದ್ಯಂತ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸೂಚಿಸಿದೆಯಾದರೂ ಕೊರೊನಾ ಅಡ್ಡಾಗಾಲು ಹಾಕಿದೆ.
‘ಒಂದು ರಾಷ್ಟ್ರ ಒಂದು ಪಡಿತರ’ ಯೋಜನೆ ಫಲಾನುಭವಿಯಾಗಲು ಹೊಸದಾಗಿ ಪಡಿತರ ಚೀಟಿ ಹೊಂದುವ ಅಗತ್ಯವಿಲ್ಲವಾದ್ದರಿಂದ ರಾಜ್ಯದ ಜನಕ್ಕೆ ಹೆಚ್ಚಿನ ಲಾಭವಾಗಲೀ ನಷ್ಟವಾಗಲೀ ಆಗಿಲ್ಲ. ರಾಜ್ಯ ಸರ್ಕಾರವೇ ಉಚಿತವಾಗಿ ತಲಾ 7 ಕೆಜಿ ಪಡಿತರ ವಿತರಿಸುತ್ತಿರುವುದರಿಂದ ಸ್ಥಳೀಯರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ ಹೊರ ರಾಜ್ಯಗಳ ವಲಸಿಗರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಪಡಿತರ ಚೀಟಿ ಸಿಗುವುದಿಲ್ಲವಾದ್ದರಿಂದ ತಮ್ಮ ರಾಜ್ಯದ ಪಡಿತರ ಚೀಟಿಯನ್ನೇ ನೀಡಿ ಪಡಿತರ ಪಡೆಯಲು ಅವಕಾಶ ಇರುವುದು ವಲಸಿಗರಿಗೆ ನಿಜಕ್ಕೂ ಆಹಾರ ಭದ್ರತೆ ಕಲ್ಪಿಸುತ್ತದೆ.
ರಾಜ್ಯದಲ್ಲಿ ಜನವರಿಯಲ್ಲೇ ಯೋಜನೆ ಜಾರಿಗೆ ಬಂದಿದ್ದರೂ, ಮಾಹಿತಿ ಕೊರತೆಯಿಂದ ಫಲಾನುಭವಿಗಳಿಗೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಪಡಿತರ ಚೀಟಿ ಹೊಂದಿಲ್ಲದ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಯೋಜನೆಯಡಿ ಲಭ್ಯವಿರುವಂತೆ ತಲಾ 5 ಕೆಜಿ ಅಕ್ಕಿ 1 ಕೆಜಿ ಬೇಳೆ ವಿತರಿಸಲಾಗಿದೆ. ಸೋಂಕು ಬರದಿದ್ದಲ್ಲಿ ಯೋಜನೆ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಲು ಅವಕಾಶವಿತ್ತು. ಆದರೆ ಕೊರೊನಾ ವ್ಯಾಪಿಸಿದ್ದರಿಂದ ವಲಸಿಗರಿಗೆ ಯೋಜನೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿಲ್ಲ.
ಯೋಜನೆಯ ಸವಲತ್ತು ಪಡೆಯಲು ಸ್ಥಳೀಯರಾಗಲೀ, ವಲಸಿಗರಾಗಲೀ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಆಧಾರ್ ಕಾರ್ಡ್ ಲಿಂಕ್ ಮಾಡಿದ ನಂತರ ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕವೇ ಪಡಿತರ ಪಡೆದುಕೊಳ್ಳಬೇಕು. ಹೀಗಾಗಿ ಆಹಾರ ವಿತರಣೆಯಲ್ಲಿರುವ ವ್ಯಾಪಕ ಭಷ್ಟಾಚಾರ ಕಡಿಮೆಯಾಗಲಿದೆ ಎಂಬುದು ಕೇಂದ್ರದ ನಿರೀಕ್ಷೆ. ರಾಜ್ಯ ಆಹಾರ ಇಲಾಖೆಯ ಮಾಹಿತಿಯಂತೆ ಪ್ರಸ್ತುತ ರಾಜ್ಯದಲ್ಲಿ ಶೇ 100ರಷ್ಟು ಪಡಿತರ ಚೀಟಿಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾಗಿದೆ. ಜೊತೆಗೆ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳಿಗೆ ಈ ಆಧಾರ್ ಲಿಂಕ್ ಮಾಡಿರುವುದರಿಂದ ಎರಡು ಕಡೆ ಪಡಿತರ ಪಡೆಯಲು ಸಾಧ್ಯವಾಗದಂತೆ ಅಥವಾ ನಕಲಿ ಕಾರ್ಡ್ ಮೂಲಕ ಯೋಜನೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲದಂತಾಗಿದೆ.
ರಾಜ್ಯದಲ್ಲಿ ಉಚಿತ ಪಡಿತರ ವಿತರಣೆಯಾಗುತ್ತಿರುವುದರಿಂದ ಕೇಂದ್ರ ಯೋಜನೆ ತಲುಪಬೇಕಿದ್ದು ವಲಸಿಗರಿಗಷ್ಟೇ. ಒಂದು ವೇಳೆ ರಾಜ್ಯದ ಜನ ಹೊರ ರಾಜ್ಯಗಳಿಗೆ ಹೋದಾಗ ಮಾತ್ರ ಉಚಿತವಾಗಿ ಸಿಗುತ್ತಿರುವ ಪಡಿತರವನ್ನು ಕೇಂದ್ರ ನಿಗದಿ ಮಾಡಿರುವಂತೆ ಕೆಜಿ ಅಕ್ಕಿಗೆ 3 ರೂಪಾಯಿಯಂತೆ ನೀಡಿ ತಲಾ 5 ಕೆಜಿ ಅಕ್ಕಿಯನ್ನು ಯಾವುದೇ ಪಡಿತರ ಅಂಗಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
ಸದ್ಯ ಹೊರ ರಾಜ್ಯಗಳಲ್ಲಿರುವ ಪಡಿತರ ಚೀಟಿಗಳಲ್ಲಿದ್ದ 1,900 ಸದಸ್ಯರ ಹೆಸರು ರಾಜ್ಯದ ಕಾರ್ಡ್ಗಳಲ್ಲಿಯೂ ಆಧಾರ್ ಲಿಂಕ್ ಮೂಲಕ ಪತ್ತೆಯಾಗಿದೆ. ಹೀಗಾಗಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ಸರಿಯಾದ ಗುರುತಿನ ಚೀಟಿ ಹೊಂದಿಲ್ಲದವರಿಗಷ್ಟೇ ಸೌಲಭ್ಯ ಪಡೆಯಲು ಸಮಸ್ಯೆಯಾಗಿದೆ. ಜೊತೆಗೆ ಮಾಹಿತಿ ಕೊರತೆಯಿಂದಾಗಿಯೂ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ.