ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಪ್ರಶ್ನೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ, ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಸರ್ಕಾರ ಮಾರಾಟಗಾರರಿಗೆ ಗುರಿ ನಿಗದಿ ಪಡಿಸಿರುವ ಬಗ್ಗೆ ಶಾಸಕರು ಪ್ರಸ್ತಾಪಿಸುತ್ತಿದ್ದು, ಸರ್ಕಾರ ಅನಧಿಕೃತ ಮದ್ಯ ಮಾರಾಟ ತಡೆಯಲು ಕ್ರಮ ಜರುಗಿಸಬೇಕು ಎಂದು ಹೇಳಿದರು. ಕಲಬುರ್ಗಿಯಲ್ಲಿ ಕಾಲೇಜಿನ ಎದುರಿಗೆ ಬಾರ್ ನಡೆಸಲಾಗುತ್ತಿದೆ. ಈ ಬಗ್ಗೆ ದಾಖಲೆ ಒದಗಿಸುತ್ತೇನೆ, ಕಿರಾಣಿ ಅಂಗಡಿಯಲ್ಲೂ ಮದ್ಯ ಮಾರಾಟವಾಗುತ್ತಿದೆ ಎಂದು ಶಾಸರ ರೇವೂರ ಹೇಳಿದರು.
ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮದ್ಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿರುವ ಗುರಿ ಮತ್ತು ಅನಧಿಕೃತ ಮದ್ಯ ಮಾರಾಟದ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದಾರೆ. ಕಲಬುರ್ಗಿಯಲ್ಲಿ ಕಾನೂನು ಬಾಹಿರ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ತಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.
ಅನಧಿಕೃತ ಬಾರ್-ರೆಸ್ಟೋರೆಂಟ್ ನಡೆಯುತ್ತಿರುವ ಬಗ್ಗೆ ದಾಖಲೆಗಳು ಶಾಸಕರ ಬಳಿ ಇದ್ದರೆ ಸಚಿವರಿಗೆ ನೀಡಲಿ. ಸಚಿವರು ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಇಡೀ ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ಆರೋಪಗಳಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಕಾಗೇರಿ ಸೂಚಿಸಿದರು.