ಬೆಂಗಳೂರು: ಇಂದು ಕ್ರಮಬದ್ಧ ರಾಜೀನಾಮೆ ಪತ್ರ ನೀಡಿದ್ದ ಮೂವರು ಅತೃಪ್ತ ಶಾಸಕರ ವಿಚಾರಣೆ ನಡೆಯಲಿದೆ.
ಶಾಸಕರಾದ ಆನಂದ್ ಸಿಂಗ್, ನಾರಾಯಣಗೌಡ, ರಾಮಲಿಂಗ ರೆಡ್ಡಿ, ಗೋಪಾಲಯ್ಯ, ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ಪತ್ರ ಕ್ರಮ ಬದ್ಧವಾಗಿದ್ದವು. ಈ ಸಂಬಂಧ ಇಂದು ವಿಚಾರಣೆಗೆ ಬರುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾರಾಯಣ ಗೌಡರಿಗೆ ಸೂಚಿಸಿದ್ದರು. ಇಂದು ಮೂರು ಗಂಟೆಗೆ ಮೂವರು ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹಾಜರಾಗಲಿದ್ದು, ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ. ರಾಜೀನಾಮೆ ನೀಡಲು ಕಾರಣವಾದ ಅಂಶಗಳನ್ನು ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಇಡಲಿದ್ದಾರೆ.
ಇಂದು ನಡೆಯುವ ವಿಚಾರಣೆ ಸಂದರ್ಭ ಒಂದು ವೇಳೆ ರಾಜೀನಾಮೆ ಸ್ವಇಚ್ಛೆಯಿಂದ ನೀಡಿದ್ದಾರೆ ಎಂಬುದು ಸ್ಪೀಕರ್ ಗೆ ಮನವರಿಕೆಯಾದರೆ ಒಂದು ನಿರ್ಧಾರಕ್ಕೆ ಬರಲಿದ್ದಾರೆ. ಇದರ ಜತೆಗೆ ಅತೃಪ್ತ ಶಾಸಕರ ವಿರುದ್ಧದ ಸಾರ್ವಜನಿಕ ಅಹವಾಲನ್ನೂ ಸ್ಪೀಕರ್ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ, ಅಂತಿಮ ತೀರ್ಪು ನೀಡಲಿದ್ದಾರೆ.
ಅತೃಪ್ತರಾದ ನಾರಾಯಣ ಗೌಡ ಹಾಗೂ ಪ್ರತಾಪ್ ಗೌಡ ಪಾಟೀಲ್ ನಿನ್ನೆ ಸ್ಪೀಕರ್ ರನ್ನು ಭೇಟಿಯಾಗಿರುವ ಹಿನ್ನೆಲೆ ಇಂದು ವಿಚಾರಣೆಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಅವರು ನಿನ್ನೆ ಸ್ಪೀಕರ್ನ್ನು ಭೇಟಿಯಾಗಿ ಮತ್ತೆ ಮುಂಬೈಗೆ ತೆರಳಿರುವುದರಿಂದ ಇಂದು ಮೂರು ಗಂಟೆಗೆ ಸ್ಪೀಕರ್ ಮುಂದೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ಜುಲೈ 15 ರಂದು ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯರಿಗೆ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದೆ.