ಬೆಂಗಳೂರು : ಇಂದು ವಿಧಾನಸಭೆ ಕಲಾಪ ಕೋಲಾಹಲದೊಂದಿಗೆ ಆರಂಭವಾಯಿತು. ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ವಾಗ್ವಾದ ಸ್ಪೀಕರ್ ಕಾಗೇರಿ ಅವರ ಕೋಪಕ್ಕೆ ಕಾರಣವಾಯಿತು.
ಮಾನಹಾನಿ ಆಗುತ್ತೆ ಎಂದು ಕೋರ್ಟ್ ಮೆಟ್ಟಿಲೇರಿದ್ದು ಯಾಕೆ? ಎಂಬ ವಿಚಾರವಾಗಿಯೇ ಗೃಹ ಸಚಿವ ಬೊಮ್ಮಾಯಿ ಮತ್ತು ಶಾಸಕ ಪರಮೇಶ್ವರ್ ನಾಯ್ಕ್ ನಡುವೆ ವಾಗ್ಯುದ್ಧ ನಡೆಯಿತು.
ನಾನು ನನ್ನ ಕ್ಷೇತ್ರಕ್ಕೆ ಸಂಬಂಧಪಟ್ಟಪ ಪ್ರಶ್ನೆ ಕೇಳಿಲ್ಲ. ಶಾಸಕರು ಕೋರ್ಟ್ಗೆ ಹೋಗುವ ಮುಂಚೆ ನಾನು ಈ ಪ್ರಶ್ನೆ ಕೇಳಿದ್ದೆ. ಇದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಶ್ನೆ. ಆದರೆ, ಈಗ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ನಮ್ಮ ಪ್ರಶ್ನೆಗೆ ಉತ್ತರಿಸಲು ಇವರಿಗೆ ನೈತಿಕತೆ ಇಲ್ಲ ಎಂದು ಶಾಸಕ ಪರಮೇಶ್ವರ್ ನಾಯ್ಕ್ ಕಿಡಿಯಾದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು. ಆಗ ಸ್ಪೀಕರ್ ಕಾಗೇರಿ ಅವರು ಮುಂದಿನ ಪ್ರಶ್ನೆ ಕೇಳಲು ಶರತ್ ಬಚ್ಚೇಗೌಡರ ಹೆಸರನ್ನು ಕೂಗಿದರು.
ಆದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇದು ಸರಿಯಲ್ಲ. ಎಲ್ಲರಿಗೂ ಅವರವರ ಮಾನಹಾನಿ ತಡೆಗಟ್ಟಲು ಸಂವಿಧಾನಾತ್ಮಕ ಹಕ್ಕಿದೆ. ಆ ಹಕ್ಕನ್ನು ಕಾನೂನಿನ ಮೂಲಕ ಎಲ್ಲರೂ ಚಲಾವಣೆ ಮಾಡುತ್ತಾರೆ. ಹಿಂದಿನ ಸಂದರ್ಭದಲ್ಲಿ ನಿಮ್ಮಲ್ಲಿರುವವರು ಯಾರು ತಡೆಯಾಜ್ಞೆ ತಂದಿಲ್ವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟ ಎಂಇಎಸ್ ಪುಂಡ : ಬೆಳಗಾವಿಯಲ್ಲಿ ನಾಡದ್ರೋಹಿಯ ಉದ್ಧಟತನ
ರಾಸಲೀಲೆ ಪ್ರಕರಣದಲ್ಲಿ ಸಿಲುಕಿಕೊಂಡು ಮಾನಹಾನಿಗೆ ತಡೆಯಾಜ್ಞೆ ತಂದಿರುವವರನ್ನು ನೀವು ನಿಮ್ಮ ಸಂಪುಟದಲ್ಲಿ ಮುಂದುವರೆಸಿದ್ದೀರಲ್ಲಾ ನಿಮಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ಆಗ ಗೃಹ ಸಚಿವ ಬೊಮ್ಮಾಯಿ, ನೀನೇ ಮಂತ್ರಿಯಿದ್ಯಲ್ಲಾ ಆಗ ನಿಮ್ಮ ಸಚಿವ ಸಂಪುಟದಲ್ಲಿ ಏನು ನಡೀತು ಎಂದು ಕಾಲೆಳೆದರು. ಈ ವೇಳೆ ಇಬ್ಬರ ನಡುವೆ ವಾಗ್ಯುದ್ಧ ನಡೆಯಿತು. ಸ್ಪೀಕರ್ ಕಾಗೇರಿ ಸುಮ್ಮನಿರಿ ಎಂದು ಎಷ್ಟೇ ಬಾರಿ ಹೇಳಿದರು ಸದನದ ಸದಸ್ಯರು ತಮ್ಮ ವಾಗ್ವಾದ ಮುಂದುವರೆಸಿದರು.
ಜಿ.ಪರಮೇಶ್ವರ್ ಅವರಿಗೆ, ನಿಮ್ಮ ಶಾಸಕರಿಗೆ ಹೀಗೆ ಅಸಭ್ಯವಾಗಿ ನಡೆದುಕೊಳ್ಳಲು ಕಲಿಸಿದರೆ ನನಗೆ ಸದನ ನಡೆಸಲು ಕಷ್ಟವಾಗುತ್ತದೆ ಎಂದು ಕಾಗೇರಿ ಹೇಳಿದರು. ಆಗಲೂ ಶಾಸಕ ಪರಮೇಶ್ವರ್ ನಾಯ್ಕ್ ಕುಳಿತುಕೊಳ್ಳದ ಕಾರಣ ಆಕ್ರೋಶಗೊಂಡ ಕಾಗೇರಿ ಅವರು ಸಭಾಧ್ಯಕ್ಷರ ಪೀಠದಿಂದ ಎದ್ದು ನಿಂತರು.
ನಾನು ಮೊದಲ ಬಾರಿ ಸದನದಲ್ಲಿ ಎದ್ದು ನಿಲ್ಲುತ್ತಿದ್ದೇನೆ. ಪರಮೇಶ್ವರ್ ನಾಯ್ಕ್ ಯಾವುದಕ್ಕಾದರೂ ಒಂದು ಇತಿಮಿತಿ ಇರಬೇಕು. ಸದನ ಎಂದರೆ ಏನೆಂದುಕೊಂಡಿದ್ದೀರಿ? ಹುಡುಗಾಟಿಕೆ, ತಮಾಷೆ ಮಾಡುತ್ತೀರಾ? ಯಾರು ಹೇಳೋರು ಕೇಳೋರು ಇಲ್ಲ ಎಂದುಕೊಂಡಿದ್ದೀರೇನು? ಸಭಾಧ್ಯಕ್ಷರ ಪೀಠಕ್ಕೆ ಗೌರವವಿಲ್ಲವೇ ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ:ಸಿದ್ದರಾಮಯ್ಯ V/s ರೂಪಾಲಿ: ಸದನದಲ್ಲಿ ಸದ್ದು ಮಾಡಿದ ಮಾತೃ ಪೂರ್ಣ ಯೋಜನೆ
ಇಷ್ಟು ಜನರ ಅಪೇಕ್ಷೆಗೆ ತಕ್ಕಂತೆ ಸದನಕ್ಕೆ ಬರುತ್ತೀರಿ. ಲಕ್ಷಾಂತರ ಜನ ನಿಮಗೆ ಮತ ನೀಡಿ ಗೆಲ್ಲಿಸಿರುತ್ತಾರೆ. ಅವರ ಭಾವನೆ ವ್ಯಕ್ತಪಡಿಸುವ ಬದಲು ಹುಡುಗಾಟಿಕೆ ಮಾಡುತ್ತೀರಾ? ನನ್ನನ್ನು ಕ್ಷಮಿಸಿ ಮೊದಲ ಬಾರಿ ಸ್ಪೀಕರ್ ಆದ ನಂತರ ನಾನು ಎದ್ದು ನಿಲ್ಲುತ್ತಿದ್ದೇನೆ. ಈ ಸ್ಥಿತಿ ಸದನಕ್ಕೆ ಬಂದರೆ ನಾನು ಕ್ಷಮಿಸಲ್ಲ ಎಂದು ಎಚ್ಚರಿಸಿದರು. ಬಳಿಕ ಜಿ.ಪರಮೇಶ್ವರ್ ಎದ್ದುನಿಂತು ಸ್ಪೀಕರ್ ಕಾಗೇರಿ ಬಳಿ, ನಿಮ್ಮ ಮನಸ್ಸಿಗೆ ನೋವು ತಂದಿದ್ದರೆ ಕ್ಷಮಿಸಿ ಎಂದು ಕೇಳಿದರು.