ಬೆಂಗಳೂರು : ಅಕ್ರಮ ಮದ್ಯ ಮಾರಾಟದ ಬಗ್ಗೆ ಸದನದಲ್ಲಿ ಪ್ರಸ್ತಾಪವಾದ ಸಂದರ್ಭ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಖ್ಯಮಂತ್ರಿಗಳೇ ರೆವಿನ್ಯೂ ಹೆಚ್ಚು ಮಾಡೋದು ಬಿಟ್ಟು, ಕಡಿಮೆ ಮಾಡಿಸಲು ನಿಮ್ಮ ಅಧಿಕಾರಿಗಳಿಗೆ ಹೇಳಿ ಎಂದು ಸಲಹೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಸದಸ್ಯ ತುಕಾರಾಂ ಪ್ರಶ್ನೆ ಕೇಳಿ, ಮದ್ಯ ಮಾರಾಟದಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿ ಹಣ ಗಳಿಸೋದು ಸರಿಯಲ್ಲ ಎಂದರು.
ತುಕಾರಾಂ ಮಾತಿಗೆ ಧ್ವನಿಗೂಡಿಸಿದ ಸ್ಪೀಕರ್
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯಸೇವನೆಯಿಂದ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಹಾಳಾಗುತ್ತಿವೆ. ಅಬಕಾರಿ ಇಲಾಖೆಗೆ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕೆಂಬ ಗುರಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದರು.
ಸರ್ಕಾರ ಅಬಕಾರಿ ಇಲಾಖೆಗೆ ಇಂತಿಷ್ಟೇ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕೆಂದು ಗುರಿ ನಿಗದಿಪಡಿಸುತ್ತದೆ. ಪರಿಣಾಮ, ಅಕ್ರಮ ಮದ್ಯ ಮಾರಾಟಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುರಿ ಸಾಧಿಸಲು ಅಬಕಾರಿ ಇಲಾಖೆಯವರು ಅಕ್ರಮವಾಗಿ ಗ್ರಾಮೀಣ ಭಾಗಗಳಲ್ಲಿ ಸಣ್ಣ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಅವಕಾಶ ಕೊಡುತ್ತಾರೆ. ಪರಿಣಾಮ, ಕಾಲೇಜು ವಿದ್ಯಾರ್ಥಿಗಳು ಹಾಗೂ ಅನೇಕ ಕುಟುಂಬಗಳು ಹಾಳಾಗಿವೆ. ಇದರ ಬಗ್ಗೆ ಸರ್ಕಾರ ಎಚ್ಚರವಹಿಸಬೇಕು ಎಂದರು.
ಬೆಂಗಳೂರು ಕಚೇರಿಯಲ್ಲಿ ಕುಳಿತು ಹಣಕಾಸು ಇಲಾಖೆಯವರು ವರ್ಷಕ್ಕೆ ಇಷ್ಟು ಮದ್ಯ ಮಾರಾಟ ಮಾಡಬೇಕು, ಇಷ್ಟು ಲಾಭ ಗಳಿಸಬೇಕೆಂದು ಗುರಿಯನ್ನು ನಿಗದಿಪಡಿಸುತ್ತಾರೆ. ಇನ್ನೊಂದು ಬಾರಿ ಅವರು ನಿಮಗೆ ಗುರಿ ನಿಗದಿಪಡಿಸಲು ಸೂಚಿಸಿದರೆ ಆ ಇಲಾಖೆಯ ಅಧಿಕಾರಿಗಳನ್ನು ಗ್ರಾಮೀಣ ಭಾಗಗಳಿಗೆ ಕಳುಹಿಸಿಕೊಡಿ ಎಂದರು. ಹಳ್ಳಿಯಲ್ಲಿ ಮದ್ಯ ಹರಾಜು ಹಾಕ್ತಿರೋದನ್ನು ಮೊದಲು ನಿಲ್ಲಿಸಿ ಎಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮತ್ತಿತರರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರು, ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಾಗಲಿ ಅಥವಾ ಕಲಬೆರಕೆ ಮಾರಾಟಕ್ಕೆ ಅವಕಾಶಕೊಟ್ಟಿಲ್ಲ. ಎಲ್ಲೆಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೋ ಅಂತಹ ಕಡೆ ದಾಳಿ ನಡೆಸಲಾಗಿದೆ. ಇಲಾಖೆಯ ಅಧಿಕಾರಿಗಳು ಅನೇಕ ಕಡೆ ಗೌಪ್ಯವಾಗಿ ಭೇಟಿ ಕೊಟ್ಟಿದ್ದಾರೆ. ಕೆಲವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.
2018-19ರಲ್ಲಿ 302, 2019-20ರಲ್ಲಿ 235, 20-21 255 ಹಾಗೂ 2021-2022ರ ನವೆಂಬರ್ ವೇಳೆಗೆ 82 ಕಡೆ ದಾಳಿ ನಡೆಸಲಾಗಿದೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ. ನಾಳೆ ಉತ್ತರ ಕರ್ನಾಟಕದ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲೆಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆಯೋ ಅಂತಹ ಕಡೆ ಕ್ರಮ ಜರುಗಿಸಲು ಸೂಚಿಸಲಾಗುವುದು ಎಂದರು.
ನಿರ್ದಿಷ್ಟ ಪ್ರಕರಣಗಳಿದ್ದರೆ ನಮ್ಮ ಗಮನಕ್ಕೆ ತಂದರೆ ನಾನು ಅಧಿಕಾರಿಗಳಿಗೆ ಸೂಚಿಸಿ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡುವುದಾಗಿ ಹೇಳಿದರು. ಸಂಡೂರು ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ನಮ್ಮ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮದ್ಯದ ಜೊತೆಗೆ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಓದಿ: ಗೂಂಡಾ ವರ್ತನೆ ಮಾಡಿದವರನ್ನು ಗಡಿಪಾರು ಮಾಡಿ: ಹೆಚ್. ಡಿ ಕುಮಾರಸ್ವಾಮಿ