ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ನಿರ್ದೇಶನವನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ವಿಚಾರದಲ್ಲಿ ವಕೀಲರ ಅಭಿಪ್ರಾಯವನ್ನು ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅನುಭವವಿರುವ ಸ್ಪೀಕರ್ ಯೋಚಿಸಬೇಕು. ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿಯವರನ್ನು ಹೊರಗಿಟ್ಟು ಕಾಂಗ್ರೆಸ್ ಕಾನೂನು ಘಟಕದ ವಕೀಲ ಶಶಿಕಿರಣ್ ಅವರನ್ನು ಮಾತ್ರ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಶಾಸಕರು ಸ್ವತಂತ್ರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬಿಡುತ್ತಿಲ್ಲ. ಇದು ಸಂವಿಧಾನ ತಜ್ಞರು ಆಗಿರುವ ರಮೇಶ್ ಕುಮಾರ್ಗೆ ಶೋಭೆ ತರಲ್ಲ ಎಂದು ಗುಡುಗಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಇಂತಹ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇದನ್ನು ಬಿಜೆಪಿ ವಿರೋಧಿಸಲಿದೆ ಎಂದರು.