ಬೆಂಗಳೂರು: ಪಕ್ಷಾಂತರ ಕಾಯ್ದೆಗೆ ಸುಧಾರಣೆ ತರುವ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ರಾಜ್ಯದ ಹಿರಿಯ ಕಾನೂನು ತಜ್ಞರ ಸಲಹೆ, ಅಭಿಪ್ರಾಯವನ್ನು ಸಂಗ್ರಹಿಸಿದರು.
![ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿದ ಸ್ಪೀಕರ್](https://etvbharatimages.akamaized.net/etvbharat/prod-images/kn-bng-08-speaker-lawexpertopinion-script-7201951_26062020225434_2606f_1593192274_939.jpg)
ಸಂವಿಧಾನದ ಹತ್ತನೇ ಅನುಸೂಚಿಯ ಅಡಿಯಲ್ಲಿ ಪೀಠಾಸೀನಾಧಿಕಾರಿಗಳು ಮತ್ತು ಅದರ ಅಡಿ ರಚಿಸಲಾದ ನಿಯಮಗಳ ಮರುಪರಿಶೀಲನೆ ಕುರಿತು ಲೋಕಸಭಾಧ್ಯಕ್ಷರಿಂದ ರಚಿಸಲ್ಪಟ್ಟ ಸಭಾಧ್ಯಕ್ಷರುಗಳ ಸಮಿತಿ ಸದಸ್ಯರಾಗಿರುವ ಸ್ಪೀಕರ್ ಕಾಗೇರಿ ಎರಡು ದಿನಗಳ ಕಾಲ ರಾಜ್ಯದ ಉನ್ನತ ಕಾನೂನು ತಜ್ಞರ ಅಭಿಪ್ರಾಯವನ್ನು ಸಂಗ್ರಹಿಸಿದರು. ಸರ್ಕಾರದ ಹಿಂದಿನ ಅಡ್ವಕೇಟ್ ಜನರಲ್ ಉದಯ ಹೊಳ್ಳ, ಅಶೋಕ್ ಹಾರ್ನಹಳ್ಳಿ, ರವಿವರ್ಮ ಕುಮಾರ್ ಮತ್ತು ಮಧುಸೂದನ್ ನಾಯಕ್ ಜೊತೆ ಪಕ್ಷಾಂತರ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಚರ್ಚಿಸಿ, ಅಭಿಪ್ರಾಯವನ್ನು ಪಡೆದರು.
![ತಜ್ಞರ ಅಭಿಪ್ರಾಯ ಸಂಗ್ರಹಿಸಿದ ಸ್ಪೀಕರ್](https://etvbharatimages.akamaized.net/etvbharat/prod-images/kn-bng-08-speaker-lawexpertopinion-script-7201951_26062020225434_2606f_1593192274_485.jpg)
ಈಗಾಗಲೇ ಸ್ಪೀಕರ್ ಈ ಸಂಬಂಧ ರಾಜ್ಯದ ಸಂಸದೀಯ ಗಣ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಕಾನೂನು ತಜ್ಞರ ಸಲಹೆಗಳನ್ನು ಪಡೆದಿದ್ದಾರೆ. ಸದ್ಯದ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿನ 10ನೇ ಶೆಡ್ಯೂಲ್ ನಲ್ಲಿನ ನ್ಯೂನ್ಯತೆಗಳು, ಸ್ಪೀಕರ್ ಅಧಿಕಾರ, 10ನೇ ಅನುಸೂಚಿಯ ದುರುಪಯೋಗ ತಡೆಗಟ್ಟುವ ಬಗ್ಗೆ ಕಾನೂನು ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾವ ರೀತಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲ ಪಡಿಸಬೇಕು ಎಂಬ ಬಗ್ಗೆ ತಮ್ಮ ಸಲಹೆಯನ್ನ ನೀಡಿದ್ದಾರೆ.
![ತಜ್ಞರ ಅಭಿಪ್ರಾಯ ಸಂಗ್ರಹಿಸಿದ ಸ್ಪೀಕರ್](https://etvbharatimages.akamaized.net/etvbharat/prod-images/kn-bng-08-speaker-lawexpertopinion-script-7201951_26062020225434_2606f_1593192274_346.jpg)
ಈ ಬಗ್ಗೆ ಮಾಜಿ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮತ್ತು ಹಿಂದಿನ ಅಡ್ವಕೇಟ್ ಜನರಲ್ ಬಿ.ವಿ.ಆಚಾರ್ಯರ ಅಭಿಪ್ರಾಯವನ್ನು ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಸಭಾಧ್ಯಕ್ಷರು ಹಲವು ಕಾನೂನು ತಜ್ಞರ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆದಿದ್ದಾರೆ. ಈ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಕರ್ನಾಟಕದ ಪ್ರತಿನಿಧಿಯಾಗಿ ಪಕ್ಷಾಂತರ ನಿಷೇಧ ಕಾನೂನಿಗೆ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಸಕಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸ್ಪೀಕರ್ ತಿಳಿಸಿದ್ದಾರೆ.