ಬೆಂಗಳೂರು: ಒಂದೆಡೆ ಬೇಟಿ ಬಚಾವೋ ಬೇಟಿ ಪಡಾವೋ ಅಂತ ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಅದೇ ಪಕ್ಷದ ರಾಜ್ಯದ ಶಾಸಕರೊಬ್ಬರು ಮಹಿಳೆ ಮೇಲೆ ದಬ್ಬಾಳಿಕೆ ನಡೆಸಿ ಇದರ ಅರ್ಥ ಕಳೆಯುತ್ತಿದ್ದಾರೆ ಎಂದು ಶಾಸಕಿ ಸೌಮ್ಯ ರೆಡ್ಡಿ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ತೇರದಾಳ ಶಾಸಕ ಸಿದ್ದು ಸವದಿ ಮಹಾಲಿಂಗಾಪುರದಲ್ಲಿ ಚಾಂದನಿ ನಾಯಕ್ ಎಂಬುವರನ್ನು ಹೇಗೆ ತಳ್ಳಾಡಿದ್ರು ಎಂದು ನೋಡಿದ್ದೇವೆ. ಈ ದೇಶದಲ್ಲಿ ನಾವು ಮಹಿಳೆಯರನ್ನು ಪೂಜಿಸುತ್ತೇವೆ. ಆದರೆ ಈ ರೀತಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಘಟನೆಯಿಂದ ನಮಗೆ ಬೇಸರವಾಗಿದೆ" ಎಂದರು.
ಕ್ರಿಶ್ಚಿಯನ್ ಕನ್ನಡ ರಾಜ್ಯೋತ್ಸವ ಪೋಸ್ಟರ್ ವಿಚಾರ ಮಾತನಾಡಿ, "ನಾನು ಬೆಂಗಳೂರಿನ ಏಕೈಕ ಮಹಿಳಾ ಶಾಸಕಿ. ಯಾರೋ ಮಾಡಿದ ತಪ್ಪಿಗೆ ನನ್ನ ಟ್ರೋಲ್ ಮಾಡ್ತಾ ಇದಾರೆ. ನಾನು ಕನ್ನಡ ವಿರೋಧಿ ಹಾಗೂ ಹಿಂದೂ ವಿರೋಧಿ ಅಂತ ಬಿಂಬಿಸಲಾಗುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ನಾವು ಮಹಿಳೆಯರು ಸಮಾಜದಲ್ಲಿ ಕೆಲಸ ಮಾಡಬೇಕು ಅಂದ್ರೆ ಏನೆಲ್ಲಾ ಕಷ್ಟಪಡಬೇಕು. ಎಲ್ಲಾ ರೀತಿಯ ಟೀಕೆಗಳನ್ನು ಎದುರಿಸಬೇಕಾಗಿದೆ" ಎಂದರು.
ಶಾಸಕಿ ರೂಪಾ ಶಶಿಧರ್ ಮಾತನಾಡಿ, "ತೇರದಾಳದಲ್ಲಿ ನಡೆದ ಘಟನೆಯಿಂದ ಚಾಂದಿನಿ ಎಂಬಾಕೆ ತನ್ನ ಭವಿಷ್ಯದ ಕುಡಿಯನ್ನ ಕಳೆದುಕೊಂಡಿದ್ದಾಳೆ. ಒಬ್ಬ ಶಾಸಕರು ಈ ರೀತಿ ಮಾಡಿದ್ದಾರೆ ಅಂದ್ರೆ ಅಕ್ಷಮ್ಯ ಅಪರಾಧ. ಒಬ್ಬ ತಾಯಿಗೆ ನ್ಯಾಯ ಸಿಗಬೇಕಿದೆ" ಎಂದು ಹೇಳಿದರು.
ಡಾ. ಅಕೈ ಪದ್ಮಶಾಲಿ ಮಾತನಾಡಿ, "ಒಂದು ಪಕ್ಷದಿಂದ ಮಹಿಳೆಯ ಮೇಲೆ ದೌರ್ಜನ್ಯ ನಡೆದಿದೆ. ಇದೊಂದು ಹೇಯ ಕೃತ್ಯ ಅಂತಲೇ ಬಣ್ಣಿಸಬಹುದು. ಇದಕ್ಕೆ ರಾಜಕೀಯದ ಬಣ್ಣ ಬಳಿಯುವ ಬದಲು ಮಾನವೀಯತೆ ದೃಷ್ಟಿಯಿಂದ ನೋಡಬೇಕಿದೆ ಎಂದರು.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ನಾನು ಕೂಡ ಇದ್ದೆ. ಮೂವರು ಸದಸ್ಯೆಯರ ಮೇಲೆ ದೌರ್ಜನ್ಯ ನಡೆದಿದೆ. ಎದ್ದೇಳುವ ಸ್ಥಿತಿಯಲ್ಲೂ ಇರಲಿಲ್ಲ. ಸದಸ್ಯರ ಗಂಡಂದಿರ ಮುಂಭಾಗದಲ್ಲಿ ದೌರ್ಜನ್ಯ ನಡೆದಿದೆ. ಎಳೆದಾಡಿ ತುಳಿದಾಡಿದ್ದು, ಒಬ್ಬ ಮಹಿಳೆಯನ್ನು ಕಾಂಪೌಂಡ್ ಗೋಡೆಯಿಂದ ಏಳೆಂಟು ಅಡಿ ಎತ್ತರದಿಂದ ಕರೆದೊಯ್ದು ಬೀಳಿಸಿದ್ದಾರೆ. ಮೆಟ್ಟಿಲ ಮೇಲೆ ಎಳೆದಾಡಿ ಹಿಂಸೆ ಕೊಟ್ಟಿದ್ದಾರೆ. ಅನ್ಯ ರಾಜ್ಯಗಳಲ್ಲಿ ನಡೆಯುವ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಆದರೆ ನಮ್ಮ ರಾಜ್ಯದಲ್ಲಿ ಅದು ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಯಾಕೆ ಯಾರೂ ದನಿ ಎತ್ತುತ್ತಿಲ್ಲ" ಎಂದು ಪ್ರಶ್ನಿಸಿದರು.