ಬೆಂಗಳೂರು: ಆಗ್ನೇಯ ಪದವೀಧರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಗಿದಿದ್ದು, ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರೆ, ಬಂಡಾಯ ಅಭ್ಯರ್ಥಿ ಟಿ.ಟಿ.ಶ್ರೀನಿವಾಸ್ ಎರಡನೇ ಸ್ಥಾನದಲ್ಲಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆ ಮುಗಿದಿದ್ದು, ಜೆಡಿಎಸ್ ಅಭ್ಯರ್ಥಿ ಚೌಡಾರೆಡ್ಡಿ ತೂಪಲ್ಲಿ 3810 ಮೊದಲ ಪ್ರಾಶಸ್ತ್ಯದ ಮತ ಗಳಿಸಿ ಮುನ್ನಡೆ ಸಾಧಿಸಿದ್ದಾರೆ. ಇತ್ತ ಬಂಡಾಯ ಅಭ್ಯರ್ಥಿ ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ 3496 ಮತಗಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಚಿದಾನಂದ್ ಗೌಡ 3118 ಮತಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು 1411 ಮೊದಲ ಪ್ರಾಶಸ್ತ್ಯದ ಮತ ಗಳಿಸಿದ್ದಾರೆ.ಸಂಜೆ 5.30ಗೆ ಆಗ್ನೇಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು, ತಡರಾತ್ರಿ 10 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿತು.
ಒಟ್ಟು 81,749 ಮತದಾನ ನಡೆದಿತ್ತು.ಸದ್ಯ ಎರಡನೇ ಸುತ್ತಿನ ಮತ ಎಣಿಕೆ ಪ್ರಗತಿಯಲ್ಲಿದ್ದು ರಾತ್ರಿ ಪೂರ್ತಿ ಮತ ಎಣಿಕೆ ಕಾರ್ಯ ನಡೆಯಲಿದೆ. ಜೆಡಿಎಸ್, ಪಕ್ಷೇತರ ಹಾಗೂ ಬಿಜೆಪಿ ಅಭ್ಯರ್ಥಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಫಲಿತಾಂಶ ಬರುವುದು ಅಸಾಧ್ಯವಾಗಿದ್ದು, ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಅನಿವಾರ್ಯವಾಗಲಿದೆ. ನಾಳೆ ಮಧ್ಯಾಹ್ನಕ್ಕೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.