ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ನಲ್ಲಿ ಸೋರಿಕೆ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಸ್ಥಳಕ್ಕೆ ಧಾವಿಸಿ ಬಂದ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ದೊಡ್ಡ ಅನಾಹುತ ತಪ್ಪಿಸಿದರು.
ಮಹಾಲಕ್ಷ್ಮಿ ಲೇಔಟ್ನ ಶ್ರೇಯಸ್ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ನಲ್ಲಿ ತಡರಾತ್ರಿ 12 ಗಂಟೆ ವೇಳೆಗೆ ಸೋರಿಕೆಯಾಗಿದೆ. ತಕ್ಷಣ ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು, ಪೊಲೀಸರ ಮಾಹಿತಿ ಮೇರೆಗೆ ಅಗ್ನಿಶಾಮಕ ತಂಡದ ಸಿಬ್ಬಂದಿ ಹಾಗೂ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ನ ಸದಸ್ಯರು ಸ್ಥಳಕ್ಕೆ ಬಂದು, ಸೋರಿಕೆಯಾಗಿದ್ದ ಆಕ್ಸಿಜನ್ ಪ್ಲಾಂಟ್ ಸರಿಪಡಿಸಿ 6 ಜಂಬೋ ಸಿಲಿಂಡರ್ ತರಿಸಿ ರೋಗಿಗಳ ಪ್ರಾಣ ಕಾಪಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಬಾರಿಗೆ ಮಂಡ್ಯದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ: ಸಚಿವ ನಾರಾಯಣ ಗೌಡ
ಶ್ರೇಯಸ್ ಆಸ್ಪತ್ರೆಯಲ್ಲಿ 30 ಕ್ಕೂ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಆಕ್ಸಿಜನ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿರಲಿಲ್ಲ. ಅದರೆ ತಡರಾತ್ರಿ ಪ್ಲ್ಯಾಂಟ್ನಲ್ಲಿ ಸೋರಿಕೆಯಾಗಿದೆ. ಎಸಿಪಿ ರೀನಾ ಸುವರ್ಣ ನೀಡಿದ ಮಾಹಿತಿ ಮೇರೆಗೆ ಅಗ್ನಶಾಮಕ ಸಿಬ್ಬಂದಿ ಜೊತೆ ಆಗಮಿಸಿದ ಸೋನು ಸೂದ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಕೂಡಲೇ ಆರು ಜಂಬೊ ಆಕ್ಸಿಜನ್ ಸಿಲಿಂಡರ್ ತರಿಸಿ ಪ್ಲ್ಯಾಂಟ್ ರಿಪೇರಿ ಮಾಡಿಸಿಕೊಟ್ಟಿದ್ದಾರೆ.
ರೋಗಿಗಳ ಪ್ರಾಣ ರಕ್ಷಣೆ ಮಾಡಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸೋನು ಸೋದ್ ಟ್ರಸ್ಟ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಧನ್ಯವಾದ ತಿಳಿಸಿದೆ.