ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಿನ ಅಧ್ಯಕ್ಷರ ಆಯ್ಕೆ ಸಂಬಂಧ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಸಂಪೂರ್ಣ ಅಧಿಕಾರ ನೀಡಿ ಪ್ರಸ್ತಾವನಾ ನಿರ್ಣಯ ಮಂಡನೆ ಮಾಡಲಾಗಿದೆ. ಬೆಂಗಳೂರಿನ ವಸಂತನಗರ ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕರ್ನಾಟಕದಿಂದ ಮುಂದಿನ ಅಧ್ಯಕ್ಷರ ಆಯ್ಕೆಗೆ ಎಐಸಿಸಿ ಸೋನಿಯಾ ಗಾಂಧಿಯವರಿಗೆ ಸರ್ವಾನುಮತದ ಅಧಿಕಾರ ನೀಡಲಾಯಿತು.
ಹಾಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಸ್ತಾವನಾ ನಿರ್ಣಯ ಮಂಡಿಸಿದರು. ಚುನಾವಣಾಧಿಕಾರಿ ಸುದರ್ಶನ ನಾಚಿಯಪ್ಪನ್ ಎದುರು ಮಂಡಿಸಿದ ನಿರ್ಣಯಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಉಳಿದ ಶಾಸಕರು ಬೆಂಬಲ ಸೂಚಿಸಿದ್ದಾರೆ.
ಕೆಪಿಸಿಸಿ ಸಭೆ: ಬಳಿಕ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಯಾರಿಗೆ ಕೆಲಸ ಮಾಡಲು ಆಗುವುದಿಲ್ಲವೋ, ಯಾರು ವಹಿಸಿದ ಕೆಲಸ ಮಾಡುವುದಿಲ್ಲವೋ ಅಂತವರಿಗೆ ವಿಶ್ರಾಂತ್ರಿ ನೀಡಬೇಕಾಗುತ್ತದೆ. ನನ್ನ ಅವಧಿ, ನಿಮ್ಮ ಅವಧಿ ಅಲ್ಲಿಗೆ ಮುಗಿಯಿತು. ಕೆಲಸ ಮಾಡಿದರೆ ಮಾತ್ರ ಮುಂದೆ ಮುಂದುವರೆಯಲಿದ್ದೀರಿ, ಇಲ್ಲವಾದರೆ ಇಲ್ಲ ಎಂದರು.
ನಾವು ಮಾಡಿದ ಕೆಲಸಕ್ಕೆ ಬಿಜೆಪಿ ಅವರಿಗೆ ಉತ್ತರ ಕೊಡಲು ಆಗಿಲ್ಲ. ಕೊರೊನಾ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತರ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದೇವೆ. ನಾನು ಸೋಲು ಕಂಡಿರಬಹುದು, ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಅದರೆ ಸಿದ್ದಾಂತ ಮುಖ್ಯ. ಬೆಲೆಗಳು ಗಗನಕ್ಕೆ ಏರಿವೆ, ಆದಾಯವಿಲ್ಲ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ನನ್ನನ್ನು ಕೆಲವರು ತಿಹಾರ್ ಜೈಲಿಗೆ ಹೋಗಿ ಬಂದವನು ಅಂತ ಆರೋಪಿಸುತ್ತಾರೆ. ನನ್ನ ಮೇಲೆ ಯಾವ ಕಮಿಷನ್ ಆರೋಪ, ಯಾವ ಲಂಚ ಪಡೆದಿರುವ ಆರೋಪ ಇದೆ? ಮಂಚ ಹತ್ತಿದ ಆರೋಪ ಇದೆಯಾ? ನನ್ನ ಮೇಲೆ ಇಡಿಯಿಂದ ನೋಟಿಸ್ ಮೇಲೆ ನೋಟಿಸ್ ಕೊಡಲಾಗುತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ಎಲ್ಲಿ ಶ್ರಮ ಇರುತ್ತೋ ಅಲ್ಲಿ ಪ್ರತಿಫಲ ಇರುತ್ತೆ. ಇದಕ್ಕೆ ನಾನೇ ಉದಾಹರಣೆ. ಹಾಗಾಗಿ ಈಗ ಆಗಿರುವ ಪದಾಧಿಕಾರಿಗಳು ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಶಾಸಕರ ವಿರುದ್ಧ ಡಿಕೆಶಿ ಗರಂ: ನಮ್ಮಲ್ಲಿ ಕೆಲ ಶಾಸಕರಿದ್ದಾರೆ. ಒಂದು ದಿನ ಬಂದು ಕೆಲಸ ಮಾಡುವುದಕ್ಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಹಿಸಲು ಕೇಳಿದೆ. ಅವರು ಆಗಲ್ಲ ಅಂದ್ರು, ಐದು ವರ್ಷದಲ್ಲಿ ಒಂದು ದಿನ ಅದೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡುವುದಕ್ಕೆ ಆಗಲ್ಲ ಅಂದ್ರೆ ಏನ್ ಮಾಡೋದು. ಯಾವ ಎಂಎಲ್‌ಎಗೂ ಮಾಫಿ ಮಾಡೋಕೆ ಆಗಲ್ಲ. ನಿತ್ಯ ಎರಡು ಎಂಎಲ್ಎ ಫಿಕ್ಸ್ ಮಾಡಿದ್ದೇವೆ. ಯಾರು ಮುಂದಿನ ಚುನಾವಣೆಗೆ ಆಕಾಂಕ್ಷಿ ಇದ್ದಿರೋ ಅವರು ಬನ್ನಿ. ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಹಾಕಬೇಡಿ, ನೀವು ಕೆಲಸ ಮಾಡಿ ಎಂದು ತಿಳಿಸಿದರು.
ಪ್ರಿಯಾಂಕಾ ಗಾಂಧಿ ಭಾಗಿ: ಕರ್ನಾಟಕದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಯಾತ್ರೆ ವೇಳೆ ಮಹಿಳೆಯರ ಜೊತೆ ಒಂದು ಸಂವಾದ ಕಾರ್ಯಕ್ರಮ ರೂಪಿಸುವ ಯೋಜನೆ ಇದೆ. ಮಹಿಳಾ ವಿಭಾಗದವರು ಕೆಪಿಸಿಸಿ ಕಚೇರಿಗೆ ಬನ್ನಿ, ಯಾವ ರೀತಿ ಮಹಿಳೆಯರಿಗೆ ಯಾತ್ರೆಯಲ್ಲಿ ಅವಕಾಶ ಮಾಡಿಕೊಡಬೇಕು ಎಂಬುದನ್ನು ಚರ್ಚಿಸೋಣ ಎಂದರು.
ನಿಮಗೂ ಅವಕಾಶ ಇರಲಿದೆ: ಈಗಾಗಲೇ ಸೀಟು ಮೀಸಲಾಗಿದೆ ಎಂದು ತಿಳಿಯಬೇಡಿ, ನಿಮಗೂ ಅವಕಾಶ ಇರುತ್ತದೆ. ನಾಗರಾಜ್ ಯಾದವ್ ಟಿವಿಯಲ್ಲಿ ಕಿರುಚಿ ಕಿರುಚಿ ಎಂಎಲ್ಸಿ ಆದರು. ಅವನ ಬಳಿ ಹಣವೇ ಇಲ್ಲ. ನನಗೆ ಒಂದು ಟೀ ಸಹ ಕುಡಿಸಿಲ್ಲ. ಒಂದು ಬೊಕ್ಕೆ ಕೊಟ್ಟಿದ್ದಾನೆ ಅಷ್ಟೇ. ಹಾಗಾಗಿ ನಿಮಗೂ ಅವಕಾಶ ಇರುತ್ತದೆ ಎನ್ನುವ ಮೂಲಕ ಟಿಕೆಟ್ ವಿಚಾರದಲ್ಲಿ ಸಿಎಲ್ಗಿಂತ ಪಕ್ಷದ ಅಧ್ಯಕ್ಷರೇ ಅಂತಿಮ ಎಂಬ ಸಂದೇಶ ರವಾನೆ ಮಾಡಿದರು.
ಇದನ್ನೂ ಓದಿ: ಸಿಬಿಐ ಅಕ್ರಮ ಆಸ್ತಿ ಸಂಪಾದನೆ ಕೇಸ್ ದಾಖಲಿಸಿದೆ.. ಇಡಿ ಯಾವ ಎಫ್ಐಆರ್ ಹಾಕಿದೆ ಗೊತ್ತಿಲ್ಲ: ಡಿಕೆಶಿ