ಬೆಂಗಳೂರು: ಪ್ರಶ್ನೋತ್ತರ ಹಾಗೂ ಬಜೆಟ್ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ಸಚಿವರು, ಅಧಿಕಾರಿಗಳು ಗೈರಾಗಿದ್ದಕ್ಕೆ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ, ಇತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡಾ ಗರಂ ಆದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ನಿನ್ನೆ, ಮೊನ್ನೆಯಿಂದಲೂ ನಾನು ಗಮನಿಸುತ್ತಿದ್ದೇನೆ. ಸದನಕ್ಕೆ ಬರದೇ ಹೋದರೂ ಅಡ್ಡಿ ಇಲ್ಲ ಎಂಬ ಭಾವನೆ ಸಚಿವರಲ್ಲಿದೆ. ಇದು ಶೋಭೆ ತರಲ್ಲ. ಪ್ರಶ್ನೋತ್ತರ ಕಲಾಪ ಮತ್ತು ಸದನದಲ್ಲಿ ಕಡ್ಡಾಯವಾಗಿ ಹಾಜರಿರೋರು ಹಾಜರಿರಬೇಕು ಎಂದು ಸಚಿವರ ಗೈರಿಗೆ ಸ್ಪೀಕರ್ ಗರಂ ಆದರು.
ಸ್ವಪಕ್ಷ ಸದಸ್ಯ ಯತ್ನಾಳ್ ಆಕ್ಷೇಪ: ಮಂತ್ರಿ ಆಗೋದಿಕ್ಕೆ ಎಲ್ಲೆಲ್ಲೋ, ಯಾರ್ಯಾರ ಬಳಿಯೋ ಹೋಗಿ ಲಾಬಿ ಮಾಡ್ತಾರೆ. ಇಲ್ಲಿ ಸದನದಲ್ಲಿ ಬಂದು ಉತ್ತರ ಕೊಡಲ್ಲ. ಅಂತಹವರು ಯಾಕೆ ಮಂತ್ರಿ ಆಗ್ಬೇಕು? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ನೀವೇ ಮಂತ್ರಿ ಆಗಿಬಿಡಿ ಯತ್ನಾಳರೇ ಎಂದು ಕಾಂಗ್ರೆಸ್ ಸದಸ್ಯರು ಕಾಲೆಳೆದರು.
ನಂತರ ಮಾತನಾಡಿದ ಸ್ಪೀಕರ್, ಸದನದ ಪ್ರಾರಂಭವಾಗಿ ನಾಲ್ಕು ದಿನ ಆಗಿದೆ. ಸದನದಲ್ಲಿ ಕಡ್ಡಾಯವಾಗಿ ಹಾಜರಾಗಬೇಕಾದ ಮಂತ್ರಿಗಳು ಇರಬೇಕು. ಸದನಕ್ಕೆ ಬಂದರೂ ಬರದಿದ್ದರೂ ಅಡ್ಡಿ ಇಲ್ಲ ಎಂಬ ಮನಸ್ಥಿತಿ ಸಲ್ಲ. ಹೀಗಾದರೆ ಈ ವ್ಯವಸ್ಥೆಗೆ ಶಕ್ತಿ ಕೊಡಲು ಕಷ್ಟ. ಅಧಿವೇಶನಕ್ಕಿಂತ ಬೇರೆ ಯಾವುದೋ ಕಾರ್ಯಕ್ರಮ ಮುಖ್ಯ ಎಂಬ ಭಾವನೆ ಮೂಡಿದರೆ ಸದನ ನಡೆಸುವುದು ಕಷ್ಟ. ಸದನದಲ್ಲಿ ಹಾಜರಿರಬೇಕಾದ ಸಚಿವರಾದ ಶ್ರೀರಾಮುಲು, ಮುನಿರತ್ನ, ನಾರಾಯಣಗೌಡ, ಸಿ.ಸಿ.ಪಾಟೀಲ್ ಅವರ ಹೆಸರು ಓದುವ ಮೂಲಕ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಆಕ್ಷೇಪ: ಆಯವ್ಯಯದ ಚರ್ಚೆ ಆರಂಭಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿದರು. ಆಗ ಸಚಿವರು ಹಾಗೂ ಅಧಿಕಾರಿಗಳ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಸಚಿವರು ಇಲ್ಲ, ಅಧಿಕಾರಿಗಳೂ ಇಲ್ಲ. ನಾವು ಮಾತನಾಡುವುದು ಬೇಡವೆಂದರೆ ಸಭಾತ್ಯಾಗ ಮಾಡುತ್ತೇವೆ ಎಂದರು.
ಇದಕ್ಕೆ ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಬೇಸರದಿಂದ ಸದನ ನಡೆಸುವುದು ಬೇಡ ಎಂದು ಆಕ್ಷೇಪಿಸಿದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಕಾನೂನು ಸಚಿವರು ಏನು ಹೇಳುತ್ತಾರೋ ನೋಡೋಣ ಎನ್ನುತ್ತಾ, ಪ್ರಶ್ನೋತ್ತರ ಕಲಾಪ ಬೇಗ ಮುಗಿದಿದ್ದರಿಂದ ಬರುವುದು ತಡವಾಗಿರಬಹುದು ಶುರು ಮಾಡಿ ಬರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಜನರ ಸಮಸ್ಯೆ ಪರಿಹರಿಸುವುದು ನಮ್ಮ ಜವಾಬ್ದಾರಿ ಇದರಲ್ಲಿ ಕ್ರೆಡಿಟ್ ಪ್ರಶ್ನೆ ಬರಲ್ಲ: ಸಂಸದ ಪ್ರತಾಪ್ ಸಿಂಹ
ಆಗ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಐದು ನಿಮಿಷ ಸಮಯ ಕೊಡಿ ಕರೆಸುತ್ತೇನೆ ಎಂದರು. ಆಗ ಜೆಡಿಎಸ್ ಶಾಸಕರು, ಅಲ್ಲಿಯವರೆಗೂ ಸಭೆಯನ್ನು ಮುಂದೂಡಿ ಎಂದು ಒತ್ತಾಯಿಸಿದರು.
ಶಾಸಕ ಎ.ಟಿ.ರಾಮಸ್ವಾಮಿ, ಬಜೆಟ್ ಮೇಲೆ ಚರ್ಚೆ ನಡೆಯುವಾಗ ಆರ್ಥಿಕ ಅಧಿಕಾರಿಗಳೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಸಚಿವ ಕಾರಜೋಳ ಅವರು ನಾನು ಕೇಳಲು ಸಿದ್ದವಿದ್ದು, ನೋಟ್ ಮಾಡಿಕೊಳ್ಳುತ್ತೇನೆ ಮಾತನಾಡಲಿ ಎಂದು ಹೇಳಿದರು.