ಬೆಂಗಳೂರು: ಜನಾರ್ದನ ರೆಡ್ಡಿ ಒಪ್ಪಿದರೆ ಕಾಂಗ್ರೆಸ್ಗೆ ಬರಲು ರೆಡಿ ಇದ್ದೇವೆ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸದನದಲ್ಲಿ ಧರಣಿನಿರತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಲ್ಲಿ ಹೇಳಿಕೊಂಡಿದ್ದಾರೆ.
ಸದನದಲ್ಲಿ ಧರಣಿ ನಿರತ ಕೈ ಶಾಸಕರ ಭೇಟಿ ಮಾಡಲು ಹೋದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ, ಕುಶಲೋಪರಿ ಮಾತನಾಡುವ ವೇಳೆ ಈ ವಿಚಾರವನ್ನು ಸಾಂದರ್ಭಿಕವಾಗಿ ಹೇಳುತ್ತಾರೆ. ಕಾಂಗ್ರೆಸ್ ಶಾಸಕರು ಸದನದೊಳಗಿನ ಧರಣಿಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುವ ವೇಳೆ ಸೋಮಶೇಖರ್ ರೆಡ್ಡಿಯ ಈ ಮಾತು ಸೆರೆಯಾಗಿದೆ.
ಸೋಮಶೇಖರ್ ರೆಡ್ಡಿ ಸದನದಲ್ಲಿ ಧರಣಿ ನಿರತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಕುಶಲೋಪರಿ ಮಾತನಾಡುತ್ತಾ ಕೂತಿದ್ರು. ಸಿದ್ದರಾಮಯ್ಯ, ಬಾರಯ್ಯ ನಮ್ಮ ಧರಣಿಯಲ್ಲಿ ಭಾಗವಹಿಸು ಅಂತಾರೆ. ಅದಕ್ಕೆ ರೆಡ್ಡಿ ನಕ್ಕು ಸುಮ್ಮನಾಗ್ತಾರೆ. ಬಳಿಕ ನಾನು ಈ ಹಿಂದಿನಿಂದಲೂ ನಿಮ್ಮ ಅಭಿಮಾನಿ ಸರ್ ಎಂದು ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸುತ್ತಾರೆ.
ಈ ವೇಳೆ ಕುಣಿಗಲ್ ಶಾಸಕ ರಂಗನಾಥ್ ಕಾಂಗ್ರೆಸ್ ಸೇರುತ್ತೀರಾ? ಎಂದು ಕೇಳುತ್ತಾರೆ. ಆಗ ಗ್ಯಾರಂಟಿ, ಒಂದು ವೇಳೆ ಜನಾರ್ದನ ರೆಡ್ಡಿ ಒಪ್ಪಿದರೆ ಕಾಂಗ್ರೆಸ್ ಸೇರುತ್ತೇವೆ ಎನ್ನುತ್ತಾರೆ. ಅವರು ಹೇಳಿದರೆ ಆಯ್ತು. ನಾವೆಲ್ಲಾ ಕೆಲಸ ಮಾಡ್ತಾ ಹೋಗುತ್ತೇವೆ ಎಂದು ಅಚ್ಚರಿಯ ಉತ್ತರ ನೀಡುತ್ತಾರೆ. ಸದನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕರ ಅಹೋರಾತ್ರಿ ಧರಣಿಯಲ್ಲಿ ಈ ಕೆಲ ಸ್ವಾರಸ್ಯಕರ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ.
ಓದಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು: ಸದನದಲ್ಲಿ ಕೈ ಶಾಸಕರ ಅಹೋರಾತ್ರಿ ಧರಣಿ ಆರಂಭ