ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬುಧವಾರ ಭೇಟಿ ನೀಡಿ, ಸಮಾಲೋಚಿಸಿದರು.
ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ನಂತರ ವಿವಿಧ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ನಾಯಕರು ಭೇಟಿ ಕೊಟ್ಟು ಸಮಾಲೋಚಿಸಿ ತೆರಳುತ್ತಿದ್ದು, ಇದೇ ರೀತಿ ಇಂದು ಚಂದ್ರಶೇಖರನಾಥ ಸ್ವಾಮೀಜಿ ಕೂಡ ಶಿವಕುಮಾರ್ಗೆ ಧೈರ್ಯ ಹೇಳುವ ಕಾರ್ಯ ಮಾಡಿದರು.
ಭೇಟಿಯ ಬಳಿಕ ಮಾತನಾಡಿದ ಅವರು, ಡಿಕೆಶಿ ಮೇಲೆ ಪದೇಪದೆ ಹೊಟ್ಟೆ ಉರಿಯಿಂದ ದಾಳಿ ಮಾಡ್ತಿರಬಹುದು. ಒಂದು ಬಾರಿ ಸರಿ, ಎರಡು ಬಾರಿ ಸರಿ, ಪದೇಪದೆ ದಾಳಿ ಮಾಡ್ತಿದ್ದಾರೆ ಅಂದ್ರೆ ಯಾರೋ ಹೊಟ್ಟೆ ಉರಿಗೋಸ್ಕರ ಮಾಡ್ತಿರಬಹುದು. ಯಾರು ದಾಳಿ ಮಾಡಿಸ್ತಿದ್ದಾರೋ ಭಗವಂತನಿಗೇ ಗೊತ್ತು. ಡಿಕೆಶಿ ಧೈರ್ಯವಾಗಿದ್ದೇನೆ ಅಂದಿದ್ದಾರೆ. ಮನೆ ದೇವರ ಪ್ರಾರ್ಥನೆ ಮಾಡುವಂತೆ ಹೇಳಿದ್ದೇನೆ ಎಂದರು.
ಅಭ್ಯರ್ಥಿ ಕುಸುಮಾ ಭೇಟಿ : ರಾಜರಾಜೇಶ್ವರ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕೂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಕುಸುಮಾ ತಂದೆ, ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಕೂಡ ಹಾಜರಿದ್ದರು.
ಬಾಲ ಮಂಜುನಾಥ ಸ್ವಾಮೀಜಿ ಭೇಟಿ : ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹಂಗರಹಳ್ಳಿ ಮಠದ ಶ್ರೀ ಬಾಲಮಂಜುನಾಥ ಸ್ವಾಮೀಜಿಯವರು ಕೂಡ ಇಂದು ಸಂಜೆ ಡಿಕೆಶಿ ನಿವಾಸಕ್ಕೆ ಭೇಟಿ ಕೊಟ್ಟು ಸಮಾಲೋಚನೆ ನಡೆಸಿದರು.