ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಟ್ಟಡಗಳು ಇನ್ನೊಂದು ವರ್ಷದಲ್ಲಿ ಸೋಲಾರ್ ವಿದ್ಯುತ್ ದೀಪ ಸೌಲಭ್ಯ ಹೊಂದಲಿವೆ. ಅಲ್ಲದೇ ಜಲ ಜೀವನ್ ಮಿಷನ್ ಮೂಲಕ ರಾಜ್ಯದ 23 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಲ ಜೀವನ್ ಮಿಷನ್ ಮೂಲಕ ಪ್ರತಿ ಕುಟುಂಬಕ್ಕೆ ನಲ್ಲಿ ನೀರು ಕೊಡುವ ಯೋಜನೆ ಬಗ್ಗೆ ಆಯೋಜಿಸಿರುವ ಎರಡು ದಿನ ಕಾರ್ಯಾಗಾರಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು. ಯೋಜನೆಯ ಬಗ್ಗೆ ವಿಸ್ತೃತ ವಿವರಣೆ ನೀಡಿ, ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯದಲ್ಲಿ 25 ಲಕ್ಷ ಕುಟುಂಬಗಳಿಗೆ ಈಗಾಗಲೇ ನಲ್ಲಿ ಸಂಪರ್ಕ ಇದೆ. ಉಳಿದ 66 ಲಕ್ಷ ಗ್ರಾಮೀಣ ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು ಎನ್ನುವುದು ಜಲ್ ಮಿಷನ್ ಕಾರ್ಯಕ್ರಮದ ಉದ್ದೇಶ. ಮುಂದಿನ ನಾಲ್ಕು ವರ್ಷಗಳಲ್ಲಿ ಸಾಧನೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ಯೋಜನೆ ಇದೆ. ಆದರೆ ಕರ್ನಾಟಕಕ್ಕೆ ಮೂರು ವರ್ಷದ ಟಾರ್ಗೆಟ್ ಕೊಡಲಾಗಿದೆ. 66 ಲಕ್ಷ ಮನೆಗಳಿಗೆ ಸಂಪರ್ಕ ಕೊಡುವುದು ಬಾಕಿ ಇದ್ದು, ಪ್ರತಿವರ್ಷ 22 ಲಕ್ಷ ಸಂಪರ್ಕ ಕೊಟ್ಟು ಮೂರು ವರ್ಷಕ್ಕೆ ನಮ್ಮ ಟಾರ್ಗೆಟ್ ತಲುಪಬಹುದು ಎನ್ನುವ ನಿರೀಕ್ಷೆ ಹೊಂದಿದ್ದೇವೆ. ಇದಕ್ಕಾಗಿ 10,470 ಕಾಮಗಾರಿ ಗುರುತಿಸಲಾಗಿದ್ದು, 5,700 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದರು.
ಬೋರ್ಗಳನ್ನು ಅವಲಂಬಿಸಿ ಮನೆ-ಮನೆಗೆ ಗಂಗೆ ಕೊಡಲು ಕಷ್ಟವಾಗಲಿದೆ. ಹಾಗಾಗಿ ಮೊದಲ ಹಂತದಲ್ಲಿ ನದಿ ಮೂಲಗಳು ಎಲ್ಲೆಲ್ಲಿ ಇವೆಯೋ ಅಲ್ಲಿಗೆ ಹೆಚ್ಚಿನ ಒತ್ತು ನೀಡುತ್ತೇವೆ. ವಾಟರ್ ಸೋರ್ಸ್ ಎಲ್ಲೆಲ್ಲಿ ಫೇಲ್ ಆಗುತ್ತದೆಯೋ ಅಲ್ಲಿ ಮೊದಲ ಹಂತಕ್ಕೆ ನಾವು ಕೈ ಹಾಕುವುದಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ 2,169 ಕೋಟಿ ಮೊತ್ತದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಎರಡು ಹಂತಕ್ಕೆ 1,271 ಕೋಟಿ ರೂ ಅನುದಾನ ಈಗಾಗಲೇ ಬಂದಿದೆ. 5,427 ಕಿಮೀ ಗೆ 3,671 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 1.10 ಕೋಟಿ ರೂ.ಗಳ ಮಾನವ ದಿನದೊಂದಿಗೆ ಹೆಚ್ಚುವರಿ ಅನುದಾನವನ್ನು ಕೂಡ ಕೊಟ್ಟಿದ್ದಾರೆ. ಇದು ಒಟ್ಟು 104 ತಾಲೂಕಿಗೆ ಅನ್ವಯ ಆಗುತ್ತದೆ. ಇನ್ನು 685 ಗ್ರಾಮಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಾರಂಭ ಆಗಿದೆ. 2012ರಲ್ಲಿ ನಿರ್ಮಲ ಭಾರತ್ ಅಭಿಯಾನದಲ್ಲಿ 4 ಸಾವಿರ ಇದ್ದ ಅನುದಾನವನ್ನು 12 ಸಾವಿರಕ್ಕೆ ಎಸ್ಸಿ, ಎಸ್ಟಿಗೆ 15 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದರು.
ಸೋಲಾರ್ ಲೈಟ್:
ದುಬಾರಿ ವಿದ್ಯುತ್ ಶುಲ್ಕ ಹಾಗೂ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೋಲಾರ್ ಲೈಟ್ ಅಳವಡಿಸಲು ತೀರ್ಮಾನ ಮಾಡಲಾಗಿದೆ. ರಾಜ್ಯದ ಎಲ್ಲಾ 6,273 ಗ್ರಾ.ಪಂಗಳಲ್ಲಿ 5 ಏಜನ್ಸಿಗಳ ಮೂಲಕ ಸೋಲಾರ್ ಲೈಟ್ ಹಾಕಲು ತೀರ್ಮಾನಿಸಲಾಗಿದೆ. ಇದಕ್ಕೆ ಒಂದು ವರ್ಷ ಗಡುವು ನೀಡಲಾಗುತ್ತದೆ. ಕಚೇರಿಗೆ ಅಗತ್ಯ ವಿದ್ಯುತ್ ಬಳಸಿ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ಪ್ರಗತಿ ವರದಿ ಬಿಡುಗಡೆ:
ಕೇಂದ್ರ ಸರ್ಕಾರ ಪಿಎಂಜಿಎಸ್ವೈ-3 ಯೋಜನೆಯನ್ನು 2019-20 ನೇ ಸಾಲಿನಲ್ಲಿ ಘೋಷಣೆಯನ್ನು ಮಾಡಿ, ಕರ್ನಾಟಕಕ್ಕೆ 5612.00 ಕಿ.ಮೀ ಉದ್ದದ ರಸ್ತೆಗಳ ಹಂಚಿಕೆ ಮಾಡಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ಬ್ಯಾಚ್-1 ರ 3226.21 ಕಿಮೀ ಉದ್ದದ ರಸ್ತೆ ಹಾಗೂ 26 ಸೇತುವೆಗಳ ಅಭಿವೃದ್ದಿ ಕಾಮಗಾರಿಗಳನ್ನು ರೂ. 2169.72 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಸದರಿ ಕಾಮಗಾರಿಗಳಿಗೆ ಇ-ಪ್ರಕ್ಯೂರ್ಮೆಂಟ್ ಮುಖಾಂತರ ಟೆಂಡರ್ ಕರೆದಿದ್ದು, ಗುತ್ತಿಗೆ ವಹಿಸಲಾಗಿ ಪ್ರಸ್ತುತ ಸದರಿ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.
09/11/2020 ರಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-3 ಬ್ಯಾಚ್-1ರಡಿ, 321.93 ಕಿಮೀ ಉದ್ದದ 50 ರಸ್ತೆ ಕಾಮಗಾರಿಗಳಿಗೆ ರೂ. 214.69 ಕೋಟಿಗಳ ಅಂದಾಜು ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ದಿ.01.01.2021ರಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ- 3 ಬ್ಯಾಚ್-2ರಡಿ, 1879.81 ಕಿಮೀ ಉದ್ದದ 302 ರಸ್ತೆ ಹಾಗೂ 75 ಉದ್ದ ಸೇತುವೆ ಕಾಮಗಾರಿಗಳು ಒಳಗೊಂಡಂತೆ ರೂ. 1256.76 ಕೋಟಿಗಳ ಅಂದಾಜು ಮೊತ್ತಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ.
ಓದಿ: ಎಲ್ಲಾ ಗ್ರಾಮೀಣ ಪ್ರದೇಶದ ಮನೆಗಳಿಗೂ 2024ರೊಳಗಾಗಿ ಕಾರ್ಯಾತ್ಮಕ ನಳ ಸೌಲಭ್ಯ: ಸಚಿವ ಈಶ್ವರಪ್ಪ
2020-21ನೇ ಸಾಲಿನಲ್ಲಿ ಅನುಮೋದನೆಯಾದ ಒಟ್ಟಾರೆ ಅಂದಾಜು ರೂ.1471.45 ಕೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆಯಲ್ಲಿದೆ. 2019-20 ಮತ್ತು 2020-2021ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಪಿಎಂಜಿಎಸ್ವೈ-3 ಯೋಜನೆಯನ್ನು 2 ಹಂತಗಳಲ್ಲಿ ಮಂಜೂರಾತಿ ನೀಡಿದ್ದು ರಾಜ್ಯದ ಒಟ್ಟು 5427.95 ಕಿಮೀ ಉದ್ದದ ರಸ್ತೆಯನ್ನು 3641.17 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಇದು ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನೀಡಿರುವ ಕೊಡುಗೆ ಎಂದು ಸಚಿವರು ತಿಳಿಸಿದರು.
ಪಿ.ಎಂ.ಜಿ.ಎಸ್.ವೈ. 3ರ ಯೋಜನೆಗೆ ಅನುದಾನ ಬಿಡುಗಡೆ:
ಈ ಯೋಜನೆಗೆ ಕೇಂದ್ರದ ಪಾಲು ಶೇ 60 ಮತ್ತುರಾಜ್ಯದ ಪಾಲು ಶೇ 40 ರಷ್ಟಿದ್ದು, ಈಗಾಗಲೇ ಕೇಂದ್ರದ ಪಾಲು ರೂ.534.24 ಕೋಟಿ ಹಾಗೂ ರಾಜ್ಯದ ಪಾಲು ರೂ. 375.32 ಕೋಟಿ ಸೇರಿದಂತೆ ಒಟ್ಟು ರೂ. 909.56 ಕೋಟಿಗಳನ್ನು ಕರ್ನಾಟಕ ಗ್ರಾಮೀಣ ರಸೆ ಅಭಿವೃದ್ಧಿ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ 184.05 ಕಿಮೀ ಉದ್ದದ ರಸ್ತೆಗಳ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕ್ರಮ ವಹಿಸಲಾಗುತ್ತಿದೆ.
ಯೋಜನೆಯ ಫಲಶೃತಿ:
ಯೋಜನೆಯ ಅನುಷ್ಠಾನದಿಂದ, ಗ್ರಾಮೀಣ ಭಾಗದ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳಿಗೆ ಒತ್ತು ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣ ಮಾರುಕಟ್ಟೆಗಳು (GRAMS), ಪ್ರೌಢ ಮಾಧ್ಯಮಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಸಂಪರ್ಕಿಸುವ ಪ್ರಮುಖ ಗ್ರಾಮೀಣ ಸಂಪರ್ಕ/ಲಿಂಕ್ ರಸ್ತೆಗಳನ್ನು ಅಭಿವೃದ್ದಿ ಪಡಿಸಿರುವುದರಿಂದ ಗ್ರಾಮೀಣ ಭಾಗದ ಸಾಮಾಜಿಕ ಪರಿಸ್ಥಿತಿಯನ್ನು ಗಣನೀಯವಾಗಿ ಉತ್ತಮಪಡಿಸಿದೆ. ಕೃಷಿ ಆದಾಯ ಮತ್ತು ಉತ್ಪಾದಕ ಉದ್ಯೋಗಾವಕಾಶಗಳಲ್ಲಿ ನಿರಂತರ ಹೆಚ್ಚಳವನ್ನು ಉಂಟುಮಾಡುತ್ತಿದೆ. ಉನ್ನತ ಗುಣಮಟ್ಟದ ರಸ್ತೆ ನಿರ್ಮಾಣ ಮತ್ತು ನಿರ್ಮಾಣದ ನಂತರ ನಿರ್ವಹಣೆಯು ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.