ಬೆಂಗಳೂರು: ಗುಜರಾತ್ನ ಜನಪ್ರಿಯ ಅಮುಲ್ ಹಾಲು ಹಾಗೂ ಮೊಸರು ರಾಜ್ಯದಲ್ಲಿ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭಿಸಿರುವ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳಾಗುತ್ತಿದ್ದು, ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ. ಸಿ ಸತೀಶ್ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ. ಎಸ್ ಪ್ರೇಮನಾಥ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಕರಾಗಿದ್ದ ಎ.ಎಸ್.ಪ್ರೇಮನಾಥ್ ಪ್ರಕಾರ, ನಂದಿನಿ ಉತ್ಪನ್ನ ರಾಜ್ಯದ ಹೆಮ್ಮೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸರ್ಕಾರ ಶ್ರಮಿಸಬೇಕು. ರಾಜ್ಯದಲ್ಲಿ ಅಮುಲ್ ಹಾಲಿನ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡುವುದರ ಬಗ್ಗೆ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಪ್ರತಿಕ್ರಿಯೆ ನೀಡಬೇಕು. ರಾಜ್ಯ ಬಿಜೆಪಿ ಸರ್ಕಾರ ನಂದಿನಿ ಉತ್ಪನ್ನ ಉಳಿಸಿಕೊಳ್ಳಲು ಬದ್ಧವಾಗಿರಬೇಕು. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಮಾತನಾಡಿ, ’’ರಾಜ್ಯದ ಹೈನು ಉದ್ಯಮ ಅತ್ಯಂತ ಸದೃಢವಾಗಿದೆ. ದೇಶದ ಯಾವುದೇ ಸಂಸ್ಥೆ ವಿರುದ್ಧ ಸಮರ್ಥವಾಗಿ ನಿಲ್ಲುವ ಶಕ್ತಿ ಹೊಂದಿದೆ. ನಂದಿನಿ ಮಣಿಸಲಾಗದ ಮಟ್ಟದಲ್ಲಿ ರಾಜ್ಯದಲ್ಲಿ ಬೇರೂರಿದೆ. ಇದು ಜನರ ಮನೆಮಾತಾಗಿದೆ. ರಾಜ್ಯದ ಮೂಲೆ ಮೂಲೆಯನ್ನು ನಾವು ತಲುಪಿದ್ದೇವೆ. ನಾವು ಸಹ ನಮ್ಮ ಉತ್ಪನ್ನವನ್ನು ಬೇರೆ ರಾಜ್ಯಗಳಿಗೆ ಕಳುಹಿಸಿಕೊಡುತ್ತೇವೆ. ನಮ್ಮ ನಂದಿನಿ ಉತ್ಪನ್ನಕ್ಕೆ ಬೇರೆ ರಾಜ್ಯಗಳಲ್ಲಿಯೂ ಬೇಡಿಕೆ ಇದೆ. ಯಾವುದೇ ಸಂಸ್ಥೆ, ಉತ್ಪನ್ನಗಳ ಆಗಮನವನ್ನು ನಾವು ತಡೆಯಲು ಸಾಧ್ಯವಿಲ್ಲ. ಅಮುಲ್ ದೇಶದ ಪ್ರಮುಖ ಹೈನು ಉತ್ಪಾದನಾ ಸಂಸ್ಥೆಗಳಲ್ಲಿ ಮೇಲ್ಪಂಕ್ತಿಯಲ್ಲಿದೆ. ಇವರಿಂದ ಸ್ಪರ್ಧೆ ಎದುರಾಗುವುದು ನಿಜ. ಆದರೆ ಎಲ್ಲವನ್ನೂ ಎದುರಿಸಲು ಸಜ್ಜಾಗಿದ್ದೇವೆ. ರಾಜ್ಯದ ಉತ್ಪನ್ನವನ್ನು ನಾವು ದುರ್ಬಲವಾಗಿ ಪರಿಗಣಿಸಿಲ್ಲ, ಯಾರೇ ಬಂದರೂ ಸಮರ್ಥ ಸ್ಪರ್ಧೆ ಒಡ್ಡುತ್ತೇವೆ‘‘ಎಂದು ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧ ಚರ್ಚೆ: ಅಮುಲ್ ಹಾಲು ಹಾಗೂ ಮೊಸರು ರಾಜ್ಯವನ್ನು ಪ್ರವೇಶಿಸುತ್ತಿದ್ದು, ಇದರಿಂದ ಕೆಎಂಎಫ್ಗೆ ಈ ಹಿಂದೆಂದಿಗಿಂತ ಕಠಿಣ ಸ್ಪರ್ಧೆ ಎದುರಾಗುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಬೇರೆಯದೇ ರೀತಿಯ ಚರ್ಚೆ ನಡೆಯುತ್ತಿದೆ.
ನಂದಿನಿ ಕೃತಕ ಅಭಾವ- ಆರೋಪ: ಇದುವರೆಗೂ ಅಮುಲ್ ಐಸ್ಕ್ರೀಂ ರಾಜ್ಯದಲ್ಲಿ ಲಭ್ಯವಿತ್ತು. ಆದರೆ ಇನ್ನು ಮುಂದೆ ಹಾಲು, ಬೆಣ್ಣೆ, ತುಪ್ಪ, ಪನೀರ್, ಮಜ್ಜಿಗೆ, ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳು ಲಭ್ಯವಾಗಲಿದೆ. ಈಗಾಗಲೇ ರಾಜ್ಯದಲ್ಲಿ ಹೈದರಾಬಾದ್ ಮೂಲದ ದೊಡ್ಡ ಡೇರಿ, ಹೆರಿಟೇಜ್, ಮುಂಬಯಿ ಮೂಲದ ನೀಲಗಿರೀಸ್ ಮತ್ತಿತರ ಸಂಸ್ಥೆಗಳ ಉತ್ಪನ್ನ ಈಗಾಗಲೇ ಕರ್ನಾಟಕದಲ್ಲಿ ನಂದಿನಿಗೆ ಸ್ಪರ್ಧೆ ಒಡ್ಡುತ್ತಿವೆ. ಆದರೆ ಇದೀಗ ಅಮುಲ್ ಇದೆಲ್ಲಕ್ಕಿಂತ ಭಿನ್ನವಾಗಿ ಪ್ರವೇಶ ಮಾಡುತ್ತಿದೆ. ವಿಪರ್ಯಾಸ ಎಂದರೆ ರಾಜ್ಯದಲ್ಲಿ ಜಾನುವಾರುಗಳಿಗೆ ಗಂಟು ರೋಗ ಕಾಡುತ್ತಿದ್ದು, ಸಾಕಷ್ಟು ಹಸುಗಳು ಸಾವನ್ನಪ್ಪಿವೆ. ಈ ಪರಿಣಾಮ ಹಾಲು ಉತ್ಪನ್ನ ಸಹ ಕಡಿಮೆ ಆಗಿದೆ. ಸರಿಸುಮಾರು 84 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹವಾಗುತ್ತಿತ್ತು. ಆದರೆ ಗಂಟುರೋಗದ ಪರಿಸ್ಥಿತಿಯಿಂದಾಗಿ 10 ಲಕ್ಷ ಲೀಟರ್ನಷ್ಟು ಹಾಲಿನ ಉತ್ಪಾದನೆ ಕಡಿಮೆ ಅಗಿದೆ. ಈ ಮಧ್ಯೆ ನಂದಿನ ಉತ್ಪನ್ನಗಳ ಅಭಾವ ಕೂಡಾ ಎದುರಾಗಿದೆ. ಇದನ್ನು ಕೃತಕ ಅಭಾವ ಎನ್ನುವ ಆರೋಪವೂ ಕೇಳಿಬರುತ್ತಿದೆ.
ಭವಿಷ್ಯದಲ್ಲಿ ಉತ್ತರ ಭಾರತದಲ್ಲಿ ಹಿಂದೆ ಹೇರಿಕೆ ಪರಿಣಾಮದ ಮಾದರಿಯಲ್ಲೇ ಹಿಂದಿ ರಾಜ್ಯದ ಉತ್ಪನ್ನಗಳ ಹೇರಿಕೆ ಅಗಲಿದೆ. ಈಗಾಗಲೇ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂದು ನಮೂದಿಸುವಂತೆ ಸೂಚನೆ ಬಂದಿತ್ತು. ಆ ಆದೇಶವೇ ಈಗ ರದ್ದಾಗಿದೆ. ವರ್ಷದ ಹಿಂದೆ ಮಂಡ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ನಂದಿನಿ ಉತ್ಪನ್ನವನ್ನು ಪ್ರಸ್ತಾಪಿಸಿ ಹೊಗಳಿದ್ದರು. ಅಲ್ಲದೇ ಗುಜರಾತ್ನ ಅಮುಲ್ ಸಹ ಇಷ್ಟೇ ಜನಪ್ರಿಯ ಸಂಸ್ಥೆಯಾಗಿದ್ದು, ಎರಡೂ ಸಂಸ್ಥೆಗಳು ಸಮನ್ವಯ ಸಾಧಿಸಿ ಒಟ್ಟಾಗಿ ಯೋಜನೆಗಳನ್ನು ರೂಪಿಸಿಕೊಂಡು ವ್ಯಾಪಾರಕ್ಕೆ ಮುಂದಾದರೆ ಇನ್ನಷ್ಟು ಜನಪ್ರಿಯತೆ ಸಾಧಿಸಬಹುದು ಎಂದಿದ್ದರು. ಈ ಸಂದರ್ಭ ಪ್ರತಿಪಕ್ಷಗಳು ಕೆಎಂಎಫ್ ಜತೆ ಅಮುಲ್ ವಿಲೀನ ಆಗಲಿದೆ ಎಂಬ ಮಾತುಗಳನ್ನಾಡಿದ್ದವು. ಆದರೆ, ಇದನ್ನು ಬಿಜೆಪಿ ಅಲ್ಲಗಳೆದರೂ, ಇಂತದ್ದೊಂದು ಅನುಮಾನ ಹಾಗೆಯೇ ಉಳಿದಿತ್ತು. ಇದೀಗ ಅಮುಲ್ ಪ್ರವೇಶ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಜನ ವಿರೋಧಕ್ಕೆ ಕಾರಣವಾಗುತ್ತಿದೆ.
ಇಷ್ಟೊಂದು ಫೇಮಸ್ಸು ನಮ್ಮ ನಂದಿನಿ: ನಿತ್ಯ 84 ಲಕ್ಷ ಲೀಟರ್ ಹಾಲು ಸಂಗ್ರಹ, 22 ಸಾವಿರಕ್ಕೂ ಅಧಿಕ ಹಳ್ಳಿಗಳ ಜತೆ ಸಂಪರ್ಕ, 24 ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕರಿಗೆ ಬೆನ್ನೆಲುಬು, 14 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕ ಸಹಕಾರಿ ಸಂಘಗಳು, 65 ಕ್ಕೂ ಅಧಿಕ ಮಾದರಿಯ ಉತ್ಪನ್ನಗಳು, 14 ಹಾಲು ಒಕ್ಕೂಟಗಳು ಹಾಗೂ ನಿತ್ಯ 17 ಕೋಟಿ ರೂ. ರೈತರಿಗೆ ಪಾವತಿಸುತ್ತಿರುವ ಅತ್ಯಂತ ಜನಪ್ರಿಯ ಸಂಸ್ಥೆ ಕೆಎಂಎಫ್ ಆಗಿದೆ.
ಗೋ ಬ್ಯಾಕ್ ಅಭಿಯಾನ: ಅಮುಲ್ ರಾಜ್ಯಕ್ಕೆ ಅಗತ್ಯವಿಲ್ಲ. ಈ ಉತ್ಪನ್ನವನ್ನು ಹಿಂಪಡೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮುಲ್ ವಿರುದ್ಧ ಹೋರಾಟ ಆರಂಭವಾಗಿದೆ. ಗೋ ಬ್ಯಾಕ್ ಅಮುಲ್ ಎಂಬ ಅಭಿಯಾನ ಟ್ವಿಟರ್, ಫೇಸ್ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ಆಗುತ್ತಿದೆ. ನಂದಿನಿ ಇರುವಾಗ ಅಮುಲ್ ಅಗತ್ಯವಿಲ್ಲ. ಗೋ ಬ್ಯಾಕ್ ಗುಜರಾತ್' ಎಂದು ಸಾಕಷ್ಟು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವು ನಂದಿನಿ ಉತ್ಪನ್ನದ ಅಭಿಮಾನಿಗಳು, 'ಕನ್ನಡಿಗರು ಅಮುಲ್ ವಿರುದ್ಧ ಹೋರಾಟ ನಡೆಸಬೇಕು' ಎಂದು ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸುತ್ತಿದ್ದಾರೆ. ನಾವು ನಂದಿನಿ ಉತ್ಪನ್ನವನ್ನೇ ಬಳಸುತ್ತೇವೆ. ಅಮುಲ್ ಬಳಸಲ್ಲ ಅನ್ನುವ ಸಂಕಲ್ಪವನ್ನು ಕನ್ನಡಿಗರು ತೊಡಬೇಕು. ಗುಜರಾತ್ನ ಹಿಂದಿ ಉತ್ಪನ್ನವನ್ನು ರಾಜ್ಯದಲ್ಲಿ ತಳವೂರಲು ಬಿಡಬಾರದು ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಅಮುಲ್ ವಿರುದ್ಧ ಹೋರಾಟ ಜೋರಾಗಿಯೇ ಆಗಿದೆ. ಈ ಮಧ್ಯೆ ಸರ್ಕಾರ ತುಟಿಬಿಚ್ಚದಿರುವುದು ಸಹ ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಯಾವ ರೀತಿಯ ನ್ಯಾಯ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ ಎನ್ನುತ್ತಿವೆ ಕೆಎಂಎಫ್ ಮೂಲಗಳು.
ಇದನ್ನೂ ಓದಿ: ಚುನಾವಣೆ ವೇಳೆ ಅಮುಲ್ ವಿವಾದ.. ಕಾಂಗ್ರೆಸ್- ಜೆಡಿಎಸ್ ಆಕ್ಷೇಪ ಏಕೆ?.. ಈ ಬಗ್ಗೆ ಬಿಜೆಪಿ ನಿಲುವೇನು?