ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳು ಗಾಳಿಗೆ ತೂರಿವೆ. ಸಾಮಾಜಿಕ ಅಂತರಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಸಾಮಾಜಿಕ ಅಂತರ ಪಾಲನೆ ಸಲುವಾಗಿ ಬಿಜೆಪಿ ಹಾಗೂ ಜೆಡಿಎಸ್ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಎಲ್ಲ ರೀತಿಯ ಸಭೆಗಳನ್ನು ನಿರ್ಬಂಧ ಮಾಡಲಾಗಿದೆ. ಆದರೆ ಕಾಂಗ್ರೆಸ್ ಕಚೇರಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಪ್ರತಿನಿತ್ಯ ಸಭೆಗಳು ನಡೆಯುತ್ತಿದ್ದು, ಕೆಪಿಸಿಸಿಗೆ ಡಿ.ಕೆ ಶಿವಕುಮಾರ್ ನೂತನ ಅಧ್ಯಕ್ಷರಾದ ನಂತರ ಬಿಡುವಿಲ್ಲದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ ಎನ್ನುವುದಕ್ಕೆ ವಿಧಾನಸೌಧದಲ್ಲಿ ನಡೆದ ಸಭೆಯೇ ಸಾಕ್ಷಿ. ಪ್ರತಿಪಕ್ಷ, ರೈತರು ಮತ್ತಿತರ ಸಂಘಟನೆಗಳ ಮುಖಂಡರ ಜೊತೆ ಕಾಂಗ್ರೆಸ್ ನಡೆಸಿದ ಸಭೆಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಸ್ಪಷ್ಟವಾಗಿ ಗಾಳಿಗೆ ತೂರಲಾಗಿತ್ತು. ಎಲ್ಲರೂ ಅಕ್ಕಪಕ್ಕದಲ್ಲೇ ಅಂತರವಿಲ್ಲದಂತೆ ದುಂಡುಮೇಜಿನ ಸಮ್ಮೇಳನದ ಮಾದರಿಯಲ್ಲಿ ಕುಳಿತು ಸಭೆ ನಡೆಸಿದರು. ಕೆಲವರು ಮಾಸ್ಕ್ ಅನ್ನು ಕೂಡ ಹಾಕಿಕೊಳ್ಳದೇ ಸಭೆಯಲ್ಲಿ ಮಾತುಕತೆ ನಡೆಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ಸೇರಿದಂತೆ ರೈತ ಮುಖಂಡರು, ಸಂಘಟನೆಗಳ ಮುಖಂಡರು ಸಾಮಾಜಿಕ ಅಂತರವಿಲ್ಲದೆ ಸಭೆ ನಡೆಸಿದ್ದಾರೆ.
ಜೆಡಿಎಸ್ ಕೂಡ ಇದಕ್ಕೆ ಹೊರತಲ್ಲ, ಕಚೇರಿಯನ್ನು ಬಂದ್ ಮಾಡಿದ್ದರೂ ತಮ್ಮ ತವರು ಜಿಲ್ಲೆಯಲ್ಲಿ ಸಕ್ರಿಯ ರಾಜಕೀಯ ಚಟುವಟಿಕೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟುಂಬ ತೊಡಗಿದೆ. ಆಹಾರ ಧಾನ್ಯ ವಿತರಣೆ, ಆಹಾರದ ಪೊಟ್ಟಣ ವಿತರಣೆಯಂತಹ ಕೆಲಸದಲ್ಲಿ ತೊಡಗಿಕೊಂಡಿದೆ. ಆದರೆ ಇದರಲ್ಲಿ ಸಾಮಾಜಿಕ ಅಂತರ ನಿಯಮದ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ. ಅನ್ನಂ ಪರಬ್ರಹ್ಮ ದಿನಸಿ ಕಿಟ್ ವಿತರಣೆಗೆ ಚಾಲನೆ ನೀಡುವಾಗಲೂ ಹೆಚ್ಡಿಕೆ ಕುಟುಂಬ ಹಾಗೂ ಪಕ್ಷದ ಮುಖಂಡರು ಒಬ್ಬರ ಪಕ್ಕದಲ್ಲಿ ಒಬ್ಬರು ನಿಂತಿದ್ದರು. ಫಲಾನುಭವಿಗಳೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕಿಟ್ಗಳನ್ನು ಪಡೆದುಕೊಂಡರು.
ಇಷ್ಟು ಮಾತ್ರವಲ್ಲದೇ ನಿಖಿಲ್ ದಂಪತಿ ರಾಮನಗರದ ಹಿರಿಯ ಮುಖಂಡರ ಕುಶಲೋಪರಿ ವಿಚಾರಿಸಿತು. ನಿಖಿಲ್ ಕುಮಾರ್ ಅಂತೂ ಕೈಕುಲುಕಿಯೇ ಕುಶಲೋಪರಿ ವಿಚಾರಿಸಿಬಿಟ್ಟರು. ಸ್ಯಾನಿಟೈಸರ್ ಇಲ್ಲ, ಮಾಸ್ಕ್ ಕೂಡ ಧರಿಸದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಕಚೇರಿ ಮುಚ್ಚಿದ್ದರೂ ಪಕ್ಷದ ಶಾಸಕರು ಹಾಗೂ ಸಚಿವರು ಸಾಮಾಜಿಕ ಅಂತರದ ನಿಯಮ ಪಾಲನೆ ಮಾಡುತ್ತಿಲ್ಲ. ಸಿಎಂ ಕಚೇರಿ, ಸಂಪುಟ ಸಭೆ ಹೊರತುಪಡಿಸಿ ಸಚಿವರು ನಡೆಸುವ ಸಭೆಗಳಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಆಗುತ್ತಿಲ್ಲ. ಬಿಜೆಪಿ ನಾಯಕರು ಆಹಾರ ಸಾಮಗ್ರಿ ವಿತರಣೆ ಮಾಡುವ ಸ್ಥಳದಲ್ಲಿಯೂ ಸಾಮಾಜಿಕ ಅಂತರವನ್ನು ಗಾಳಿಗೆ ತೂರಲಾಗಿದೆ. ಮಾಧ್ಯಮಗಳಿಗೆ ಹೇಳಿಕೆ ನೀಡುವಾಗಲೂ ಗುಂಪಿನಲ್ಲೇ ಬಂದು ಹೇಳಿಕೆ ನೀಡುವ ಪ್ರವೃತ್ತಿ ಇನ್ನೂ ನಿಂತಿಲ್ಲ. ನಾಲ್ವರು ಸಚಿವರೇ ಹೋಂ ಕ್ವಾರಂಟೈನ್ನಲ್ಲಿ ಇರುವಂತಾಗಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಅಸಮಾಧಾನಗೊಂಡಿದ್ದು ''ಸ್ವಲ್ಪ ಎಚ್ಚರಿಕೆಯಿಂದ ಇರಿ, ಸದಾ ಸಾಮಾಜಿಕ ಅಂತರ ಕಾಯ್ದುಕೊಳ್ಳಿ'' ಎಂದು ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸಾಮಾಜಿಕ ಅಂತರ ನಿಯಮ ಪಾಲನೆಗೆ ರಾಜಕೀಯ ಪಕ್ಷಗಳು ನಿರೀಕ್ಷಿತ ಮನ್ನಣೆ ನೀಡಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇನ್ನಾದರೂ ಜನರಿಗೆ ಆದರ್ಶವಾಗುವ ರೀತಿ ರಾಜಕೀಯ ನಾಯಕರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವ ಮೂಲಕ ಕೊರೊನಾ ವಿರುದ್ಧ ಜನ ಜಾಗೃತಿಗೆ ಮುಂದಾಗಬೇಕು.