ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪರ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆಯಲಿದ್ದಾರೆ. ಕಲ್ಲಹಳ್ಳಿ ಪರ ವಕೀಲರಾಗಿರುವ ದಿನೇಶ್ ಪಾಟೀಲ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿ ಇನ್ಸ್ಪೆಕ್ಟರ್ ಅವರಿಗೆ ದೂರು ವಾಪಸ್ ಪಡೆಯುವಂತೆ ಮನವಿ ಮಾಡಿ ಐದು ಪುಟಗಳ ಸುದೀರ್ಘ ಮನವಿ ಪತ್ರವನ್ನು ನೀಡಿದ್ದಾರೆ.
ಮನವಿ ಪತ್ರದಲ್ಲೇನಿದೆ.? ಸಚಿವರದ್ದು ಎನ್ನಲಾದ ಸಿಡಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಒಪ್ಪಿಸಿದ್ದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಚಾರಿತ್ರ್ಯ ವಧೆಯಾಗುತ್ತಿದೆ. ನಾನು ದೂರು ನೀಡುತ್ತಿದ್ದಂತೆ ವ್ಯವಸ್ಥಿತವಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡಲಾಗಿದೆ. ಸಾಮಾಜಿಕ ಹೊಣೆಗಾರಿಕೆಯಿಂದ ನೀಡಿದ ಸಿಡಿ ಸಾಮಾಜಿಕ ಪೀಡೆಯಿಂದ ಪರಿವರ್ತನೆಯಾಯಿತು. ಕೆಲ ಜಾತಿ ಸಂಘಟನೆಗಳು ಹಲವು ರೀತಿ ವ್ಯಾಖ್ಯಾನಗಳು ನೀಡಿದ್ದು ಹೊರತುಪಡಿಸಿದರೆ ಮಹಿಳೆಯರ ಸಹಾಯಕ್ಕೆ ನಿಲ್ಲದೇ ಹೋದವು ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುತ್ತ ಬ್ಲಾಕ್ಮೇಲ್ ಮಾಡುವವರನ್ನು ಡೀಲ್ ಮಾಡುವವರನ್ನು ಬಂಧಿಸಿ ಎಂದೇ ನಾನು ಆಗ್ರಹಿಸಿದ್ದೆ. ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಕೂಡ ಸಂದೇಹವಾಹಕನನ್ನೇ ಮುಗಿಸಿಬಿಡು ಎಂಬ ಸಿದ್ಧಾಂತದ್ದಾಗಿದೆ. ನಾನು ವಾಸ ಮಾಡುತ್ತಿರುವ ಮನೆಯ ಚಿತ್ರಗಳನ್ನೇ ಹರಿಬಿಟ್ಟು, ನನ್ನ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡಲಾಯಿತು ಎಂದಿದ್ದಾರೆ.
ಸಾಮಾಜಿಕ ಹೋರಾಟಗಾರನಾದ ನನ್ನನ್ನು ಅಪರಿಚಿತ ವ್ಯಕ್ತಿಯೋರ್ವರು ಬಂದು ಸಿಡಿ ನೀಡಿ ಮಹಿಳೆಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಆ ಸಿಡಿಯನ್ನು ಎಲ್ಲಿಯೂ ಬಹಿರಂಗಪಡಿಸದೆ ನೇರವಾಗಿ ಕಮಿಷನರ್ ಕಚೇರಿಗೆ ಹೋಗಿ ದೂರು ನೀಡಿದ್ದೆ. ಮಾಹಿತಿ ದಾಖಲಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದನ್ನು ತನಿಖೆಗೆ ಆಗ್ರಹಿಸಿದ್ದು ಬಿಟ್ಟರೆ ಬೇರೆನೂ ಆಗಿಲ್ಲ. ತನಿಖೆಗಷ್ಟೇ ಸೀಮಿತವಾದ ಪ್ರಕರಣದಲ್ಲಿ ಸಿಡಿ ಕೊಟ್ಟಿದ್ದು ಯಾರು? ಎಲ್ಲಿಂದ ಬಂತು ಎಂಬ ಚರ್ಚೆಗಳು ನಡೆಯಲಾರಂಭಿಸಿತು. ಮಹಿಳೆಗೆ ಲೈಂಗಿಕ ದೌರ್ಜನ್ಯಗಳು ನಡೆದಿದೆಯೇ? ಅಧಿಕಾರ ದುರುಪಯೋಗವಾಗಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಾಗಿತ್ತು ಹೊರತು ಇಡೀ ಪ್ರಕರಣ ಮಾಹಿತಿದಾರರ ಕೇಂದ್ರಿಕೃತವಾಗಿರುವುದು ದುರದೃಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಡಿಯಲ್ಲಿರುವ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸದೆ ಪೊಲೀಸ್ ಹೇಳಿಕೆಯೇ ಇಲ್ಲದೆ ಅವರ ಪರ ತೀರ್ಪು ಕೊಡುವ ಹುನ್ನಾರಗಳು ನಡೆದವು. ನಾನು ನೀಡಿದ ದೂರಿನ ಉದ್ದೇಶವೇ ನನಗೆ ಹಾಗೂ ಮಹಿಳೆಗೆ ತಿರುಗುಬಾಣವಾಯಿತು. ಈ ನಿಟ್ಟಿನಲ್ಲಿ ಸಾಮಾಜಿಕ ಹಿತದೃಷ್ಟಿಯಿಂದ ಈ ದೂರನ್ನು ವಾಪಸ್ ಪಡೆಯುತ್ತಿರುವುದಾಗಿ ಪತ್ರದಲ್ಲಿ ಕಲ್ಲಹಳ್ಳಿ ತಿಳಿಸಿದ್ದಾರೆ.
ದೂರು ವಾಪಸ್ ಮಾನ್ಯ ಆಗುತ್ತಾ? :
ಕಾನೂನು ಪ್ರಕಾರ ಸೂಕ್ತ ಕಾರಣದೊಂದಿಗೆ ದೂರು ನೀಡಿದ ವ್ಯಕ್ತಿಯೇ ದೂರು ವಾಪಸ್ ಪಡೆಯಬೇಕು. ಖುದ್ದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ದೂರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ದೂರು ವಾಪಸ್ ಅರ್ಜಿ ಮಾನ್ಯವಾಗುವುದಿಲ್ಲ. ಸದ್ಯ ಪೊಲೀಸರು ಮನವಿ ಪತ್ರ ಪಡೆದು ದೂರುದಾರರಿಗೆ ಬರುವಂತೆ ವಕೀಲರಿಗೆ ಹೇಳಿ ಕಳುಹಿಸಿದ್ದಾರಂತೆ.