ಬೆಂಗಳೂರು: ಅಕ್ರಮವಾಗಿ ನೇಪಾಳಿ ಯುವಕರನ್ನು ಹೊರದೇಶಗಳಿಗೆ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿ, 9 ಮಂದಿ ಯುವಕರನ್ನು ರಕ್ಷಣೆ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಂಭುಗಿರಿ ಎಂಬಾತ ಚಿಕ್ಕಜಾಲ ಪೊಲೀಸ್ ಠಾಣಾ ಸರಹದ್ದಿನ ಗ್ರೀನ್ ಲೀಫ್ ಇಂಟರ್ ನ್ಯಾಷನಲ್ ಕಂಫರ್ಟ್ ಎಂಬ ಲಾಡ್ಜ್ನಲ್ಲಿ ಉಳಿದುಕೊಂಡು ನೇಪಾಳದಿಂದ ಅಮಾಯಕ ಹುಡುಗರನ್ನು ಕರೆಸಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ. ಜೊತೆಗೆ ಅವರಿಂದ ಹಣ ಪಡೆದು ಆರ್.ಪಿ ಶರ್ಮ ಎಂಬುವವರ ಮುಖಾಂತರ ಹೊರದೇಶಗಳಿಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳಾದ ಶಂಭುಗಿರಿ ಮತ್ತು ಆರ್.ಪಿ ಶರ್ಮ ಬಂಧಿಸಿ ತನಿಖೆ ಮುಂದುವರೆಸಿದೆ.