ಬೆಂಗಳೂರು : ಕೆಲ ಸಾರ್ವಜನಿಕ ಉದ್ದೇಶಗಳನ್ನು ಈಡೇರಿಸುವಾಗ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಮಾಳದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ.
ಶಿವಮೊಗ್ಗ ಜಿಲ್ಲೆಯ ವಿಟ್ಟಲಾಪುರದ ನಿವಾಸಿ ವೀರಭದ್ರಗೌಡ ಮತ್ತು ಬಾಲವಿಂದೂರಪ್ಪ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಜತೆಗೆ, ಕೆಲ ಸಾರ್ವಜನಿಕ ಉದ್ದೇಶದ ಯೋಜನೆಗಳಲ್ಲಿ, ಮರಗಳು, ಸಸ್ಯಗಳು ಕಣ್ಮರೆಯಾಗುವುದು ಸಾಮಾನ್ಯವಾಗಿದ್ದು, ಅನಿವಾರ್ಯವೂ ಆಗಿರಲಿದೆ. ಹೀಗಾಗಿ ಆಕ್ಷೇಪಾರ್ಹವಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇಂಗ್ಲಿಷ್ನ ಖ್ಯಾತ ತತ್ವಜ್ಞಾನಿ ಹಾಗೂ ನ್ಯಾಯಶಾಸ್ತ್ರಜ್ಞ ಜೆರೆಮಿ ಬೆಥಾಮ್ ಅವರು ತನ್ನ ನೈತಿಕ ಮತ್ತು ಶಾಸನದ ತತ್ವಗಳ ಪರಿಚಯ ಎಂಬ ಕೃತಿಯಲ್ಲಿ ದೊಡ್ಡ ಮಟ್ಟದ ಒಳ್ಳೆಯ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಸಣ್ಣ ಕೆಡಕುಗಳು ಉಂಟಾಗುವುದು ಸಾಮಾನ್ಯವಾಗಿರಲಿದೆ ಎಂಬುದಾಗಿ ಪ್ರತಿಪಾದಿಸಿದ್ದಾರೆ. ಹೀಗಾಗಿ ಹೊಸ ಯೋಜನೆಗಳನ್ನು ಮಾಡುವಾಗ ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಗೋಮಾಳ ಜಮೀನು ಗ್ರಾಮದ ಜಾನುವಾರುಗಳ ಉದ್ದೇಶಕ್ಕಾಗಿ ಮೀಸಲಿಡುವುದು ಸಾಮಾನ್ಯ. ಆದರೆ, ಅಧಿಕಾರಿಗಳು ಜನಸಂಖ್ಯೆ ಬೆಳವಣಿಗೆಯನ್ನು ಪರಿಶೀಲಿಸಿಯೇ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ 5 ಎಕರೆ ಭೂಮಿಯನ್ನು ಮೀಸಲಿಡುವ ನಿರ್ಧಾರವನ್ನು ತೆಗೆದುಕೊಂಡಿರುವುದು ಸಾರ್ವಜನಿಕ ಉದ್ದೇಶವಾಗಿದೆ. ಅಲ್ಲದೆ, ಇದಕ್ಕಾಗಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದಕ್ಕೆ ದಾಖಲೆಗಳು ಇಲ್ಲ. ಅಲ್ಲದೆ, ಈ ರೀತಿಯ ಯೋಜನೆಗಳು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ : ಸೊರಬ ತಾಲೂಕಿನ ಆನವಟ್ಟಿ ಪಂಚಾಯತ್ನಲ್ಲಿರುವ ಕುಪಟೂರು ಗ್ರಾಮದಲ್ಲಿ ಸರ್ವೇ ನಂಬರ್ 59 ರಲ್ಲಿ 5 ಎಕರೆ ಜಮೀನನ್ನು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮಂಜೂರು ಮಾಡಿ ಆದೇಶಿಸಲಾಗಿತ್ತು. ಉದ್ದೇಶಿಸಿದ ಜಮೀನನ್ನು ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಮಂಜೂರು ಮಾಡುವುದಕ್ಕೂ ಮುನ್ನ ಪರಿಸರದ ಮೇಲೆ ಆಗಬಹುದಾದ ಪರಿಣಾಮವನ್ನು ಅಧ್ಯಯನ ಮಾಡಲು ಸೂಚನೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾರಂಭದಲ್ಲಿ ಇದೇ ಸರ್ವೇ ನಂಬರ್ನಲ್ಲಿ 2 ಎಕರೆ ಜಮೀನನ್ನು ಘನ ತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭಕ್ಕೆ ನಿಗದಿ ಪಡಿಸಲಾಗಿತ್ತು. ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನು ಪರಿಗಣಿಸದೆ ಮಂಜೂರು ಮಾಡಿದ್ದ ಕ್ರಮ ಗಮನಕ್ಕೆ ಬಂದ ತಕ್ಷಣ ಆದೇಶವನ್ನು ಹಿಂಡೆಯಲಾಗಿತ್ತು. ಆದರೆ, ಇದೀಗ 5 ಎಕರೆ ಜಮೀನನ್ನು ನಿಗದಿ ಪಡಿಸಲಾಗಿದೆ. ಇದರಿಂದ ಈ ಭಾಗದ ರೈತರ ಗೋವುಗಳಿಗೆ ಮೇವಿಗೆ ತೊಂದರೆಯಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅಲ್ಲದೆ, ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ನಗರವೂ ಬೆಳವಣಿಗೆಯಾಗುತ್ತಿದೆ. ತ್ಯಾಜ್ಯದ ಉತ್ಪಾದನೆಯೂ ಹೆಚ್ಚಳವಾಗಲಿದೆ. ಇದೇ ಕಾರಣದಿಂದ ಎರಡು ಎಕರೆ ಬದಲಿಗೆ 5 ಎಕರೆ ಜಮೀನನ್ನು ಗುರುತಿಸಿದ್ದಾರೆ. ಈ ಬೆಳವಣಿಗೆ ಸಾರ್ವಜನಿಕ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಕೋರಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಈ ಭಾಗದಲ್ಲಿ ಜನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ತ್ಯಾಜ್ಯ ನಿರ್ವಹಣಾ ಘಟಕ ಪ್ರಾರಂಭಿಸಬೇಕಾದ ಅಗತ್ಯವಿದೆ. ಇದೇ ಕಾರಣದಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಎರಡು ಎಕರೆಯಿಂದ ಐದು ಎಕರೆಗೆ ಹೆಚ್ಚಳ ಮಾಡಲಾಗಿದೆ. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ : ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ: ಅಪರಾಧಿಗೆ 05 ವರ್ಷ ಶಿಕ್ಷೆ, 12 ಸಾವಿರ ದಂಡ