ಬೆಂಗಳೂರು : ನಿರ್ದೇಶಕ ಎಸ್. ನಾರಾಯಣ್ ಅವರ ವಂಚನೆ ಪ್ರಕರಣ ಒಂದೂವರೆ ವರ್ಷದ ನಂತರ ಮತ್ತೆ ಸದ್ದು ಮಾಡ್ತಿದೆ. ನಾರಯಾಣ್ ಮತ್ತೆ ತನಿಖೆ ನಡೆಸುವಂತೆ ಸಿಸಿಬಿ ಮೊರೆ ಹೋದ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಇಂದು ನಟ ಅಭಿಜಿತ್ ಅವರನ್ನು ವಿಚಾರಣೆ ನಡೆಸಲಾಗಿದೆ.
ಎಸ್. ನಾರಾಯಣ್ ಸೇರಿದಂತೆ ಅಶೋಕ್ ಸೇಠ್, ಫಾರೂಕ್ ಪಾಷಾ, ಅನಂತ್ ಅಯ್ಯಸ್ವಾಮಿ, ರಾಜೇಂದ್ರ ಪ್ರಸಾದ್ ಸೇರಿ ಐವರು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ರು. ಈ ಸಿನಿಮಾದಲ್ಲಿ ಹಿರಿಯ ನಟ ಅಭಿಜಿತ್ ಕೂಡ ನಟಿಸಿದ್ದು, ಉಳಿದ ನಿರ್ಮಾಪಕರನ್ನು ನಾರಾಯಣ್ ಅವರಿಗೆ ಪರಿಚಯ ಮಾಡಿಸಿದ್ದರು. ಹಣವಿಲ್ಲದೆ ಸಿನಿಮಾ ನಿಂತ ಸಮಯದಲ್ಲಿ ನಾರಾಯಣ್ ಅವರು ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಸೈಟ್ ಮೇಲೆ ಫಾರೂಕ್ ಸಾಲ ಕೊಡಿಸಿದ್ದನು.
ನಾರಾಯಣ್ ಅವರು ಮಗನ ಹೆಸರಲ್ಲಿ 1ಕೋಟಿ 56 ಲಕ್ಷ ಲೋನ್ಗೆ ದಾಖಲೆ ನೀಡಿ ಬಂದ ಹಣವನ್ನು ಸಿನಿಮಾಗೆ ಹಾಕಿದ್ದರು. ಆದರೆ, ಫಾರೂಕ್ ನಾರಾಯಣ್ ಅವರಿಗೆ ತಿಳಿಯದಂತೆ ಎರಡು ಕೋಟಿ ಐದು ಲಕ್ಷ ಲೋನ್ ಮಂಜೂರು ಮಾಡಿಸಿ ವಂಚನೆ ಮಾಡಿದ್ದನು.
ಜೊತೆಗೆ ಬಿಡಿಎಗೆ ಸಂಬಂಧಿಸಿದ ಸೈಟ್ ಅನ್ನು ನಕಲಿ ದಾಖಲೆ ಸೃಷ್ಟಿಸಿ ಹೆಚ್ಚಿನ ಲೋನ್ ಪಡೆದು ನಿವೇಶನ ಮಾಲೀಕ ಬೈಯ್ಯಣ್ಣ ಎಂಬುವರ ಅಕೌಂಟಿಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಮತ್ತೆ ತನಿಖೆ ಆರಂಭಿಸಿದ್ದು, ಇಂದು ನಟ ಅಭಿಜಿತ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.
ಇದನ್ನೂ ಓದಿ: 'ಗಂಗೂಬಾಯಿ ಕಾಠಿಯಾವಾಡಿ' ಟ್ರೈಲರ್ ರಿಲೀಸ್.. ವೇಶ್ಯೆಯಾಗಿ ಆಲಿಯಾ ಭಟ್ ಮಿಂಚು!