ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಆರೋಪಿ ಮೊಹಮ್ಮದ್ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ.
ಮೊದಲೇ ದೇಶ ತೊರೆಯಲು ನಿರ್ಧರಿಸಿದ್ದ ಮನ್ಸೂರ್ ಕಳೆದ 6 ತಿಂಗಳಿಂದ 5 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಫ್ರೀ ಚೆಕ್ ಮತ್ತು ಬೇನಾಮಿ ಹೆಸರುಗಳಲ್ಲಿ ಡ್ರಾ ಮಾಡಿಕೊಂಡಿದ್ದಾನೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಇಂದು ಸಹ ಎಸ್ಐಟಿ ಅಧಿಕಾರಿಗಳು ಶಿವಾಜಿನಗರದಲ್ಲಿರುವ ಮನ್ಸೂರ್ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬೆನ್ನು ಬಿದ್ದಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಮನ್ಸೂರ್ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದ. ಈ ಕಾರಣಕ್ಕಾಗೇ ಬ್ಯಾಂಕುಗಳಲ್ಲಿದ್ದ ಹಣವನ್ನು ಫ್ರೀ ಚೆಕ್ ನೀಡಿ ಡ್ರಾ ಮಾಡಿಕೊಂಡಿದ್ದಾನೆ.
ಆ್ಯಂಬಿಡೆಂಟ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಂದಿನಿಂದ ಮನ್ಸೂರ್ ಎಚ್ಚೆತ್ತುಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ದಾಳಿ ಮಾಡಿ ಬಂಧಿಸಬಹುದೆಂದು ಊಹಿಸಿದ್ದ ಆತ ಆಸ್ತಿಯನ್ನು ಬೇನಾಮಿ ಹೆಸರುಗಳಲ್ಲಿ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ, ಗಲ್ಫ್ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿದ್ದನಂತೆ.
ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಈತನ ಹಣದ ವ್ಯವಹಾರದ ಮೇಲೆ ಭೂಗತ ಪಾತಕಿಗಳು ಮತ್ತು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸದ್ಯ ದುಬೈ ಅಥವಾ ಇಂಗ್ಲೆಂಡ್ನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಬಲೆಗೆ ಇಂಟರ್ ಪೋಲ್ ಮೂಲಕ ರಾಜ್ಯ ಮತ್ತು ಗೃಹ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳುತ್ತಿವೆ ಎಂದು ತಿಳಿದುಬಂದಿದೆ.