ಬೆಂಗಳೂರು: ನಗರದಲ್ಲಿ ಐಎಂಎ ಒಡೆತನದ ಎರಡು ದಿನಸಿ ಸೂಪರ್ ಮಾರ್ಕೆಟ್ ಹಾಗೂ ಒಂದು ಫಾರ್ಮಸಿ ವೇರ್‌ಹೌಸ್ ಮೇಲೆ ಗುರುವಾರ ಎಸ್ಐಟಿ ದಾಳಿ ನಡೆಸಿ 1.28 ಕೋಟಿ ರೂ. ಮೌಲ್ಯದ ದಿನಬಳಕೆ ವಸ್ತುಗಳು ಹಾಗೂ ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಮಾರುತಿ ಸೇವಾನಗರ ವ್ಯಾಪ್ತಿಯ ಥಾಮಸ್ ಟೌನ್‌ನಲ್ಲಿದ್ದ ಮಲ್ಬೇರಿ ಗ್ರೀನ್ಸ್ ಸೂಪರ್ ಮಾರ್ಕೆಟ್ ಬೃಹತ್ ಮಳಿಗೆ ಮೇಲೆ ಡಿವೈಎಸ್‌ಪಿ ಕೆ.ರವಿಶಂಕರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ 45 ಲಕ್ಷ ವೌಲ್ಯದ ದಿನಬಳಕೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿ ಬಿಟಿಎಂ 2ನೇ ಹಂತದಲ್ಲಿರುವ ಮತ್ತೊಂದು ಮಲ್ಬೇರಿ ಗ್ರೀನ್ಸ್ ಸೂಪರ್ ಮಾರ್ಕೆಟ್ ಬೃಹತ್ ಮಳಿಗೆ ಮೇಲೂ ಡಿವೈಎಸ್‌ಪಿ ಜಿ.ಟಿ.ಶ್ರೀನಿವಾಸ್ ನೇತೃತ್ವದ ತಂಡ ದಾಳಿ ನಡೆಸಿ, 68 ಲಕ್ಷ ರೂ. ಮೌಲ್ಯದ ಮಾಲು ಹಾಗೂ 41 ಸಾವಿರ ರೂ. ನಗದು, ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆದಿದೆ.
ಡಿವೈಎಸ್‌ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಟ್ಯಾನರಿ ರಸ್ತೆಯ ಫ್ರಂಟ್ ಲೈನ್ ಸೆಂಟ್ರಲ್ ವೇರ್‌ಹೌಸ್ ಮೇಲೆ ದಾಳಿ ನಡೆಸಿ ಸುಮಾರು 15 ಲಕ್ಷ ಮೌಲ್ಯದ ಔಷಧಿ ಉಪಕರಣ, ಔಷಧಿ ಹಾಗೂ ಸೌಂದರ್ಯ ವರ್ಧಕಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.