ಬೆಂಗಳೂರು: ಬಿಜೆಪಿ ಮೈತ್ರಿ ಸರ್ಕಾರದ ಶಾಸಕರನ್ನು ತನ್ನತ್ತ ಸೆಳೆದು ಸಮ್ಮಿಶ್ರ ಸರ್ಕಾರದ ಬಹುಮತ ಕುಸಿಯುವಂತೆ ಮಾಡಲು ಆಪರೇಷನ್ ಕಮಲ ನಡೆಸಲು ಕಸರತ್ತು ನಡೆಸಿದ್ದಾರೆಂದು ಮೂಲಗಳು ಹೇಳುತ್ತಿವೆ. ಆದರೆ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಗಿನಿಂದ ಯಾವುದೇ ರಾಜಕೀಯ ಬೆಳವಣಿಗೆಗಳು ಕಂಡುಬಂದಿಲ್ಲ.
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ಇಲ್ಲದೆ ಪೊಲೀಸ್ ಸಿಬ್ಬಂದಿ ಹಾಗೂ ಕಚೇರಿಯ ಭದ್ರತಾ ಸಿಬ್ಬಂದಿ ಮಾತ್ರ ಕಾವಲು ಕಾಯುತ್ತಿರುವುದು ಕಂಡುಬಂತು. ಇದನ್ನು ಹೊರತುಪಡಿಸಿದರೆ ಯಾವೊಬ್ಬ ಬಿಜೆಪಿ ನಾಯಕರು ಕೂಡಾ ಕಚೇರಿಯತ್ತ ಸುಳಿದಿಲ್ಲ.
ಹಠಾತ್ ರಾಜಕೀಯ ಬೆಳವಣಿಗೆ ನಡೆದು ನಿನ್ನೆ 12 ಮಂದಿ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ, ಬಿಜೆಪಿ ನಾಯಕರು ತಮ್ಮ ಕಾರ್ಯ ಚಟುವಟಿಕೆಗಳನ್ನು ಹೊರಗಿನಿಂದಲೇ ನಿಭಾಯಿಸುತ್ತಿರುವುದರಿಂದ ಬೆಳಗ್ಗೆ 11 ಗಂಟೆವರೆಗೆ ಯಾವೊಬ್ಬ ನಾಯಕರು ಸಹ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಮೈತ್ರಿ ಸರ್ಕಾರದ ಬಹುಮತ ಕುಸಿಯುತ್ತಿರುವ ಬೆನ್ನಲ್ಲೆ, ಮತ್ತೊಮ್ಮೆ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷಗಳು ವಿಫಲವಾಗುವ ಸುಳಿವು ಅರಿತಿರುವ ಬಿಜೆಪಿ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದೆ. ಇನ್ನು, ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ಕೆಲವು ಶಾಸಕರನ್ನು ಸೆಳೆಯಲು ಒಳತಂತ್ರ ರೂಪಿಸಿದ್ದು, ರಾಜ್ಯಪಾಲರ ಬಳಿ ತೆರಳಿ ಬಹುಮತ ಸಾಬೀತುಪಡಿಸಲು ಪ್ಲಾನ್ ಮಾಡುತ್ತಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿರುವ ಮೈತ್ರಿ ಸರ್ಕಾರದ ಕೆಲ ಶಾಸಕರು ಅಜ್ಞಾತ ಸ್ಥಳಕ್ಕೆ ತೆರಳಿ ಮುಂದಿನ ನಡೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆನ್ನಲಾಗಿದೆ. ಇತ್ತ ಮೈತ್ರಿ ಸರ್ಕಾರದ ಶಾಸಕರ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದಂತೆ, ಬಿಜೆಪಿ ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದೆ ಎನ್ನುವುದಕ್ಕೆ ಪುಷ್ಠಿ ಸಿಗುತ್ತಿದೆ.