ಬೆಂಗಳೂರು: ರೇಷ್ಮೆ ಬೆಲೆ ದಿಢೀರ್ ಕುಸಿತ ಹಿನ್ನೆಲೆ ಸರ್ಕಾರದಿಂದಲೇ ಕಚ್ಚಾ ರೇಷ್ಮೆ ಖರೀದಿಸುವಂತೆ ರೇಷ್ಮೆ ಸಚಿವ ಡಾ.ನಾರಾಯಣಗೌಡ ಸೂಚನೆ ನೀಡಿದರು. ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ರೇಷ್ಮೆ ಬೆಲೆ ದಿಢೀರ್ ಕುಸಿತ ಹಿನ್ನೆಲೆ ಸಮಾಲೋಚನೆ ನಡೆಸಿದರು. ಬೆಲೆ ಕುಸಿತದಿಂದ ರೈತರನ್ನು ರಕ್ಷಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವ ಡಾ.ನಾರಾಯಣಗೌಡ ಚರ್ಚೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ರೇಷ್ಮೆಗೂಡಿನ ದರ ದಿಢೀರ್ ಕುಸಿತಕ್ಕೆ ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಚ್ಚಾ ರೇಷ್ಮೆಗೂಡಿನ ದರ ದಿಢೀರ್ ಕುಸಿತದಿಂದ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗಬಾರದು. ಕೂಡಲೇ ಸರ್ಕಾರ ಮಧ್ಯೆ ಪ್ರವೇಶ ಮಾಡಿ, ರೇಷ್ಮೆ ಬೆಳೆಗಾರರ ಜೊತೆ ನಿಲ್ಲಬೇಕು. ಕರ್ನಾಟಕ ರೇಷ್ಮೆ ಮಾರಟ ಮಂಡಳಿ ನಿಯಮಿತ (ಕೆಎಸ್‌ಎಂಬಿ) ಮುಖಾಂತರ ಕಚ್ಚಾ ರೇಷ್ಮೆ ಖರೀದಿ ಮಾಡುವಂತೆ ಸೂಚಿಸಿದರು.
ರೇಷ್ಮೆಗೂಡು ಉತ್ಪಾದನೆ ಹೆಚ್ಚಳ್ಳ: ಇಂದು ಸಂಜೆಯೇ ದರ ಕಮಿಟಿಯ ಸಭೆ ಕರೆದು, ನಾಳೆಯಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಚಾಲನೆ ನೀಡಬೇಕು. ರೇಷ್ಮೆ ಗೂಡಿನ ದರ ಮತ್ತೆ ಉತ್ತಮ ಸ್ಥಿತಿಗೆ ತಲುಪಬೇಕು. ರೇಷ್ಮೆಗೂಡು ಉತ್ಪಾದನೆಯಲ್ಲಿ ಶೇ. 23ರಷ್ಟು ಹೆಚ್ಚಳ ಕಂಡಿದ್ದು, ಕಳೆದ 15 ದಿನಗಳಿಂದ ಒಮ್ಮೆಲೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಕುಸಿತವಾಗಿರಬಹದು. ಜೊತೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಲೂ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಾಳೆಯಿಂದಲೇ ಕೆಎಸ್‌ಎಂಬಿ ಮೂಲಕ ಕಚ್ಚಾ ರೇಷ್ಮೆ ಖರೀದಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೇಷ್ಮೆ ಬೆಳೆಗಾರರು ಆತಂಕಕ್ಕೆ ಒಳಗಾಗಬಾರದು ಎಂದು ಅಭಯ ನೀಡಿದರು.
ಸರ್ಕಾರ ರೇಷ್ಮೆ ಬೆಳೆಗಾರರ ಬೆನ್ನಿಗಿದ್ದು, ಮತ್ತೆ ರೇಷ್ಮೆಗೂಡಿನ ಬೆಲೆ ಉತ್ತಮ ಸ್ಥಿತಿಗೆ ತಲುಪುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಇದೇ ವೇಳೆ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಭಾಗದಲ್ಲಿ ರೇಷ್ಮೆ ಹುಳು ಹಣ್ಣಾಗುತ್ತಿಲ್ಲದರ ಬಗ್ಗೆಯೂ ಸಚಿವ ಡಾ.ನಾರಾಯಣಗೌಡ ಅವರು ವರದಿ ಪಡೆದರು. ಶಿಡ್ಲಘಟ್ಟ ಭಾಗದಲ್ಲಿ 15 ದಿನ ಕಳೆದರೂ ರೇಷ್ಮೆ ಹುಳುಗಳು ಹಣ್ಣಾಗುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸಭೆ ನಡೆಸಿದರು. ಕೂಡಲೇ ರೇಷ್ಮೆ ಇಲಾಖೆಯ ವಿಜ್ಞಾನಿಗಳು ಭೇಟಿ ನೀಡಿ ನಿಖರ ಕಾರಣದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ: ರೇಷ್ಮೆ ಬೆಲೆ ದಿಢೀರ್ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿ ಕಿಲೋ ದ್ವಿತಳಿ ರೇಷ್ಮೆ ಗೂಡಿಗೆ 800 ರೂ. ಸಿಬಿ ಗೂಡಿಗೆ 600 ರೂ. ಬೆಲೆ ನಿಗದಿಪಡಿಸುವಂತೆ ರೇಷ್ಮೆ ಬೆಳೆಗಾರರು ಆಗ್ರಹಿಸಿದ್ದರು. ಇಲ್ಲದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಒಕ್ಕೂಟ ಎಚ್ಚರಿಕೆ ನೀಡಿತ್ತು. ವರ್ತಕರು ಕಡಿಮೆ ಬೆಲೆಗೆ ರೇಷ್ಮೆಗೂಡು ಖರೀದಿಸುತ್ತಿದ್ದಾರೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ ಎಂದು ರೇಷ್ಮೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿತು.
ಈವರೆಗೆ ಪ್ರತಿ ಕಿಲೋ ದ್ವಿತಳಿ ಗೂಡಿಗೆ 800 ರೂ.ರಿಂದ 900ರೂ. ಸಿಬಿ ಗೂಡಿಗೆ 600 - 700 ರೂ. ಬೆಲೆ ಇತ್ತು. ಆದರೆ, ಈಗ ಸುಮಾರು 400-500 ರೂ. ನಷ್ಟು ದಿಢೀರ್ ಕುಸಿತ ಕಂಡಿದೆ. ಈ ಹಿಂದೆ ಪ್ರತಿ ಕಿಲೋ ರೇಷ್ಮೆ ನೂಲಿಗೆ 8,000-9,000 ರೂ. ಬೆಲೆಯಿತ್ತು. ಆದರೆ, ಈಗ ಅದು 3000-4,000 ರೂ.ಗೆ ಕುಸಿದಿದೆ. ನೂಲು ಬಿಚ್ಚಣಿಕೆದಾರರ ಕುಟುಂಬಗಳು ತೊಂದರೆಗೆ ಸಿಲುಕಿವೆ. ಹೀಗಾಗಿ ರೇಷ್ಮೆ ಗೂಡಿನ ಬೆಲೆ ಕುಸಿತದಿಂದಾಗಿ ಆರ್ಥಿಕವಾಗಿ ನಲುಗಿರುವ ರೇಷ್ಮೆ ಬೆಳೆಗಾರರು ಮತ್ತು ಬಿಚ್ಚಾಣಿದಾರರ ಹಿತ ಕಾಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ಮಾಡುವ ವ್ಯಕ್ತಿಗೆ ಮೋದಿ ತಲೆಬಾಗಿ ನಮಸ್ಕಾರ: ಹೆಚ್ಡಿಕೆ