ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಜನಸಂಖ್ಯೆಗೆ ಆದರಿಸಿದಂತೆ ನೀರಿನ ಸೌಲಭ್ಯದ ವಿಸ್ತರಣೆ, ಕೆರೆಗಳ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಹಾಗೂ ಅನುದಾನಗಳನ್ನು ಸಿಎಂ ಯಡಿಯೂರಪ್ಪ ಮೀಸಲಿಟ್ಟಿದ್ದರು. ಜೊತೆಗೆ ಬೆಂಗಳೂರು ನಗರದ ಉಸ್ತುವಾರಿ ಹೊಣೆಗಾರಿಕೆಯೂ ಅವರದ್ದೇ ಆಗಿದೆ. ಆದರೆ ಬೆಂಗಳೂರಿನಲ್ಲಿ ಕೋವಿಡ್ ಮಹಾಮಾರಿಯ ತಾಂಡವ ಹೆಚ್ಚಾಗಿರುವುದರಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕೊರೊನಾ ತಡೆಗಟ್ಟುವುದೇ ಈ ವರ್ಷದ ದೊಡ್ಡ ಜವಾಬ್ದಾರಿಯಾಗಿದೆ. ಹೀಗಾಗಿ ಯೋಜನೆಗಳು ಘೋಷಣೆಯಾಗಿಯೇ ಉಳಿದಿದ್ದು, ಒಂದೂ ಕಾರ್ಯರೂಪಕ್ಕೆ ಬಂದಿಲ್ಲ.
ಬೆಂಗಳೂರು ಅಭಿವೃದ್ಧಿಗೆ ಘೋಷಿಸಿದ್ದ ಕೆಲ ಯೋಜನೆಗಳು ಇಂತಿವೆ...
- ಕೆರೆಗಳ ಅಭಿವೃದ್ಧಿಗೆ 317 ಕೋಟಿ ರೂಪಾಯಿ ಮೀಸಲು. 200 ಕೋಟಿ ರೂಪಾಯಿ- 24 ಮೆಟ್ರೋ ನಿಲ್ದಾಣಗಳಲ್ಲಿ, ರಸ್ತೆಗಳ ಮೂಲಕ ಹಾದುಹೋಗುವ ಒಳಚರಂಡಿಗಳ ಅಭಿವೃದ್ಧಿ ಎಂದು ಯೋಜನೆ ಹಾಕಿ ಕೊಳ್ಳಲಾಗಿತ್ತು. ಕೆರೆ ಅಭಿವೃದ್ಧಿಗಾಗಿ ಬಿಬಿಎಂಪಿಗೆ ಅನುದಾನ ನೀಡಿದೆಯಾದರೂ, ಲಾಕ್ ಡೌನ್ ಹಿನ್ನೆಲೆ ಪಾಲಿಕೆಯಿಂದ ಕೆರೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಜೊತೆಗೆ ಚರಂಡಿ ಕೆಲಸವೂ ನಡೆದಿಲ್ಲ.
- ಕಾವೇರಿ ಐದನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದರೂ, ಹೊಸದಾಗಿ 775 ಮಿಲಿಯನ್ ಲೀಟರ್ ನೀರು ಹರಿಸುವ ಯೋಜನೆಗೆ ಚಾಲನೆ ಸಿಕ್ಕಿಲ್ಲ.
- ಬೆಂಗಳೂರಿನ ಕೆರೆಗಳ ನೀರನ್ನು ತ್ಯಾಜ್ಯನೀರು ಸಂಸ್ಕರಣಾ ಘಟಕದ ಮೂಲಕ ಶುದ್ಧೀಕರಿಸಿ ಮತ್ತೆ ತುಂಬುವ ಯೋಜನೆಗೆ ಇನ್ನೂ ಚಾಲನೆ ದೊರೆತಿಲ್ಲ. ಕೆಲವೆಡೆ ಈ ಹಿಂದೆಯೇ ಆರಂಭವಾದ ತ್ಯಾಜ್ಯನೀರು ಸಂಸ್ಕರಣಾ ಘಟಕಗಳು ಕೆಲಸ ಮಾಡುತ್ತಿವೆ.
- ತಿಪ್ಪಗೊಂಡನಹಳ್ಳಿ ಜಲಾಶಯದಿಂದ 1.7 ಟಿಎಂಸಿ ನೀರು ಉಪಯೋಗಿಸಿಕೊಳ್ಳುವ ಯೋಜನೆಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ತಿಪ್ಪಗೊಂಡನಹಳ್ಳಿಯಲ್ಲಿ ಅಭಿವೃದ್ಧಿ ಕೆಲಸವೂ ಆರಂಭಗೊಂಡಿಲ್ಲ.
- ನೆಲಮಹಡಿ ವಾಹನ ಪಾರ್ಕಿಂಗ್ ಯೋಜನೆ ಘೋಷಿಸಲಾಗಿತ್ತು. ಆದ್ರೆ ಈಗಾಗಲೇ ಚಾಲ್ತಿಯಲ್ಲಿರುವ ಬಹುಮಹಡಿ ಪಾರ್ಕಿಂಗ್ ಕಟ್ಟಡಗಳ ಕಾಮಗಾರಿಯೂ ಪೂರ್ಣಗೊಳ್ಳದೆ ಅರ್ಧಕ್ಕೇ ನಿಂತಿವೆ.
- 20 ಕೋಟಿ ವೆಚ್ಚದಲ್ಲಿ ಕೃಷಿ ಸಂಶೋಧನಾ ಕೇಂದ್ರದ ನಿರ್ಮಾಣ ಕಾರ್ಯ ನಡೆದಿಲ್ಲ.
- ರವೀಂದ್ರ ಕಲಾಕ್ಷೇತ್ರ ಮಾದರಿಯಲ್ಲಿ ನಾಲ್ಕು ಕಲಾಕ್ಷೇತ್ರಗಳ ನಿರ್ಮಾಣ ಯೋಜನೆ ಇದ್ದು, ಈವರೆಗೆ ಯೋಜನೆಯ ರೂಪುರೇಷೆಯೇ ಸಿದ್ಧಗೊಂಡಿಲ್ಲ.
- ಆನಂದ್ ರಾವ್ ಸರ್ಕಲ್ನಲ್ಲಿ 400 ಕೋಟಿ ವೆಚ್ಚದ ಟ್ವಿನ್ ಟವರ್ ನಿರ್ಮಾಣದ ಯೋಜನೆ ಇದ್ದು, ಈ ವರ್ಷಕ್ಕೆ ಈ ಯೋಜನೆ ಘೋಷಣೆಯಾಗದೇ ಉಳಿದಿದೆ.
- 500 ಕೋಟಿ ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣ ಗಗನಕುಸುಮವಾಗಿ ಬಿಟ್ಟಿದೆ.
- ಸಣ್ಣ ಹಾಗೂ ಅತಿಸಣ್ಣ ಕೈಗಾರಿಕೆಗಳಿಗೆ ಸ್ಮಾರ್ಟ್ ಟೆಕ್ನಾಲಜಿ ನೀಡುವ ಸ್ಮಾರ್ಟ್ ತಯಾರಿಕಾ ಸೆಂಟರ್ ನಿರ್ಮಾಣಕ್ಕೂ ಕೋವಿಡ್ ಕರಿಛಾಯೆ ಬಿದ್ದಿದೆ.
- ಐಐಎಸ್ಸಿ ಸಹಯೋಗದೊಂದಿಗೆ ಕೃತಕ ಬುದ್ದಿಮತ್ತೆ ಸಂಶೋಧನಾ ಪಾರ್ಕ್ ನಿರ್ಮಾಣ ಮಾತುಕತೆ ಹಂತದಲ್ಲಿದ್ದು, ಇನ್ನೂ ಆರಂಭಗೊಂಡಿಲ್ಲ.
ಒಟ್ಟಿನಲ್ಲಿ ಈ ಎಲ್ಲಾ ಯೋಜನೆಗಳು ಚಾಲನೆಗೊಂಡಿದ್ದರೂ, ಬಿಎಸ್ ವೈ ಸರ್ಕಾರದ ಒಂದು ವರ್ಷದ ಸಾಧನೆಗೆ ಹೇಳಿಕೊಳ್ಳುವಂತಹ ಹೆಗ್ಗರುತುಗಳಾಗಿರುತ್ತಿದ್ದವು. ಆದರೆ ಯಾವುದೇ ಯೋಜನೆಗೂ ಈ ವರ್ಷ ಚಾಲನೆ ದೊರೆತಿಲ್ಲ.