ಕಲಬುರಗಿ: ಗ್ರಾಮದ ರಾಜಕೀಯ ಪ್ರಭಾವಿ ಮುಖಂಡರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆಯೇ ನಾಮಪತ್ರ ಹಿಂಪಡೆಯುವ ಪತ್ರಕ್ಕೂ ಸಹಿ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಅತಿದೊಡ್ಡ ಪಂಚಾಯಿತಿ ಎಂದು ಕರೆಸಿಕೊಳ್ಳುವ ರಾವೂರ ಗ್ರಾಪಂನಲ್ಲಿ ಪ್ರಭಾವಿ ರಾಜಕಾರಣಿಗಳು ಪ್ರತಿಷ್ಠೆ ಮೆರೆಯುತ್ತಿದ್ದಾರೆ. ರಾವೂರ ವ್ಯಾಪ್ತಿಯ ಒಟ್ಟು 32 ಸ್ಥಾನಗಳಿಗೆ 56 ನಾಮಪತ್ರ ಸಲ್ಲಿಕೆಯಾಗಿವೆ. ಗ್ರಾಮದ ಪ್ರಭಾವಿ ಮುಖಂಡರು ಎಲ್ಲಾ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆಗೊಳಿಸುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಮೋಸ ಮಾಡಿ ನಾಮಪತ್ರ ಹಿಂಪಡೆಯುವ ಪತ್ರಕ್ಕೂ ಸಹಿ ಹಾಕಿಸಿಕೊಂಡಿದ್ದಾರೆ. ಇದನ್ನು ಖಂಡಿಸಿ ವಾರ್ಡ್ ನಂ.7ರ ನೂರಾರು ಜನ ಮತದಾರರು ಗ್ರಾಪಂ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ರಾವೂರ ಗ್ರಾಮದಲ್ಲಿ ಸಂವಿಧಾನ ಬಾಹಿರವಾಗಿ ಚುನಾವಣೆ ನಡೆಸಲಾಗುತ್ತಿದೆ. ಜನಾಭಿಪ್ರಾಯ ಪಡೆಯದೆ ಎರಡೂ ಪಕ್ಷಗಳ ಮುಖಂಡರು ತಮಗಿಷ್ಟ ಬಂದತೆ ವರ್ತಿಸುತ್ತಿದ್ದಾರೆ. ತಮ್ಮ ಪರವಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವಿರೋಧ ಆಯ್ಕೆಗೆ ಮುಂದಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಸಲ್ಲಿಸಿದ ನಾಮಪತ್ರದ ಜೊತೆಗೆ ನಾಮಪತ್ರ ವಾಪಸ್ ಪಡೆಯುವ ಅರ್ಜಿಯೂ ಜೋಡಿಸಿಟ್ಟು ಮೋಸದಿಂದ ನಮ್ಮ ಸಹಿ ಹಾಕಿಸಿಕೊಂಡಿದ್ದಾರೆ. ಬುಹುತೇಕ ವಾರ್ಡ್‍ಗಳಲ್ಲಿ ಇದೇ ತಂತ್ರ ಅನುಸರಿಸಲಾಗುತ್ತಿದೆ ಎಂದು ವಂಚನೆಗೊಳಗಾದ ಅಭ್ಯರ್ಥಿಗಳಾದ ಶ್ರೀದೇವಿ, ರಜನಿಕಾಂತ, ರಹಿಮಾನ ಪಟೇಲ್ ಆರೋಪಿಸಿದ್ದಾರೆ.
ನಾವು ನಾಮಪತ್ರ ವಾಪಸ್ ಪಡೆಯುವುದಿಲ್ಲ. ಚುನಾವಣೆ ಎದುರಿಸುತ್ತೇವೆ. ಅಕ್ರಮವಾಗಿ ಸಹಿ ಹಾಕಿಸಿಕೊಂಡು ವಂಚಿಸಿರುವವರ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.