ಬೆಂಗಳೂರು: ಕೊರೊನಾ ಭೀತಿಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೇರೆ ರಾಜ್ಯಗಳಿಂದ ಸಿಲಿಕಾನ್ ಸಿಟಿಗೆ ಬರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನ ವಿದ್ಯಾರಣ್ಯಪುರದ ನಂಜಪ್ಪ ಸರ್ಕಲ್ ಬಳಿಯ ಜೋಡಿದಾರ್ ಕ್ಲಬ್, ದ್ವಾರಕ ಕಲ್ಯಾಣ ಮಂಟಪದಲ್ಲಿ ಕೆಲವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ಹಾಗೂ ಬಿಬಿಎಂಪಿಯಿಂದ ಸಿದ್ಧತೆ ಮಾಡಲಾಗಿದೆ.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು, ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ನಾವು ಬಿಡಲ್ಲ. ಕ್ಲಬ್ ಮತ್ತು ಕಲ್ಯಾಣ ಮಂಟಪ ಬಳಿ ಜನ ಓಡಾಟ ಮಾಡ್ತಾರೆ. ಕ್ವಾರಂಟೈನ್ಗೆ ಮುಂದಾಗಿರುವವರಿಗೆ ಕೊರೊನಾ ರೋಗದ ಲಕ್ಷಣ ಇದ್ರೆ ನಮಗ್ಯಾರು ಗತಿ ಎಂದು ವಿದ್ಯಾರಣ್ಯಪುರದ ಸ್ಥಳೀಯರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕ್ವಾರಂಟೈನ್ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭ ಮಾಡಿದ್ದಾರೆ.

ಸ್ಥಳೀಯರನ್ನು ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದರೂ ಜನರು ಡೋಂಟ್ ಕೇರ್ ಎಂದಿದ್ದಾರೆ.