ಬೆಂಗಳೂರು : ಕೋವಿಡ್ ಸೋಂಕು ಶ್ವಾಸಕೋಶದ ರೋಗವಾದರೂ ಇದರಿಂದ ಕಣ್ಣುಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಹಲವು ಪ್ರಕರಣಗಳಲ್ಲಿ ಕಾಣಬಹುದಾಗಿದೆ.
ಕೋವಿಡ್‍ನ ಬಹು ಮುಖ್ಯವಾದ ಸಂಕೀರ್ಣತೆಯೆಂದರೆ ರಕ್ತ ಹೆಪ್ಪುಗಟ್ಟುವುದು. ಸಣ್ಣ ಮಧ್ಯಮ ಮತ್ತು ದೊಡ್ಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಕಂಡು ಬರುತ್ತಿದ್ದು, ಇದನ್ನು ತಿಳಿಗೊಳಿಸಲೆಂದು ವೈದ್ಯರು ರೋಗಿಗಳಿಗೆ ಹೆಪ್ಪುಗಟ್ಟುವಿಕೆ ನಿರೋಧಕ ಔಷಧಗಳನ್ನು ನೀಡುತ್ತಿದ್ದಾರೆ.
ಕಣ್ಣುಗಳಿಗೆ ಸಂಬಂಧಿಸಿದಂತೆ ಕಣ್ಣುಗುಡ್ಡೆಗಳ ಹಿಂಬದಿಯಲ್ಲಿರುವ ಅಂಗಾಂಶದ ರೆಟಿನಾದಲ್ಲಿ ಸಣ್ಣ ಸಣ್ಣ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರೋಗಿಗಳಿಗೆ ಇದರ ಅರಿವಾಗಬಹುದು ಅಥವಾ ಆಗದೇ ಇರಬಹುದು.
ಒಂದು ವೇಳೆ ಇದರ ಅರಿವಾದರೆ ಒಂದು ಕಣ್ಣಿನ ದೃಷ್ಟಿ ಸ್ವಲ್ಪ ಕಡಿಮೆ ಇರಬಹುದು ಅಥವಾ ಹೆಚ್ಚೂ ಇರಬಹುದನ್ನ ಗಮನಿಸಬಹುದು ಅಂತಾರೆ ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ನ ಡಾ.ರಾಮ್ ಶ್ರೀಕಾಂತ್ ಮಿರ್ಲೆ. ಇಂತಹ ಸಂದರ್ಭಗಳಲ್ಲಿ ರೋಗಿಯು ಕೂಡಲೇ ಹತ್ತಿರದ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ.
ಕೋವಿಡ್ನಿಂದ ಕಣ್ಣಿನ ಒಳ ಭಾಗಗಳಲ್ಲಿ ಅಡ್ಡಪರಿಣಾಮ : ಕೋವಿಡ್‍ನ ಮತ್ತೊಂದು ಅಡ್ಡ ಪರಿಣಾಮವೆಂದರೆ, ಕಣ್ಣಿನ ಒಳ ಭಾಗಗಳಲ್ಲಿ ಉರಿ ಊತ(ಇನ್‍ಫ್ಲೇಮೇಷನ್) ಕಂಡು ಬರುವುದು. ಇದಕ್ಕೆ ರೆಟಿನೈಟಿಸ್ ಅಥವಾ ಯುವೆಟಿಸ್ (uveitis) ಎಂದು ಕರೆಯಲಾಗುತ್ತದೆ.
ಇದು ಅತ್ಯಂತ ವಿರಳ ಪ್ರಕರಣ ಎಂಬುದನ್ನು ನೆನಪಿನಲ್ಲಿಡಬೇಕು. ಕೋವಿಡ್ ಸಾಮಾನ್ಯವಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಮೇಲೆ ಕಡಿಮೆ ಪ್ರಮಾಣದ ಪರಿಣಾಮ ಬೀರಬಹುದು.
ಸ್ಟೆರಾಯ್ಡ್ ಬಳಕೆ ಯಾವಾಗ ಅನಿವಾರ್ಯ?: ಕೋವಿಡ್ ಸಮಸ್ಯೆ ಚಿಕಿತ್ಸೆಯಲ್ಲಿ ಸ್ಟೆರಾಯ್ಡ್ಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕೋವಿಡ್ ವೈರಸ್ ತಗುಲಿದ ಆರಂಭಿಕ ಹಂತದಲ್ಲಿ ಈ ಸ್ಟೆರಾಯ್ಡ್‍ಗಳನ್ನು ಉಪಯೋಗಿಸಬಾರದು.
ಅಂದರೆ, ಸೈಟೋಕಿನ್ಸ್ ಸ್ಟಾರ್ಮ್ ಎಂದು ಕರೆಯಲ್ಪಡುವ ಸಮಸ್ಯೆ ಇರುವ ಸಂದರ್ಭದಲ್ಲಿ ಸ್ಟೆರಾಯ್ಡ್ಗಳು ಜೀವ ರಕ್ಷಕ ಔಷಧಿಯನ್ನಾಗಿ ಬಳಸಲಾಗುತ್ತದೆ. ಆದರೆ, ಈ ಜೀವ ರಕ್ಷಕ ಸ್ಟೆರಾಯ್ಡ್‍ಗಳನ್ನು ವೈದ್ಯರ ಮಾರ್ಗದರ್ಶನದಲ್ಲಿ ಮಾತ್ರ ಪಡೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಹೆಚ್ಚು ಸುದ್ದಿಯಲ್ಲಿ ಇದ್ದು,ಬಹುತೇಕ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಿಲ್ಲ.
ಇದು ಕೆಲವೇ ಕೆಲವು ಜನರ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರದ ದಿನಗಳಲ್ಲಿ ಒಂದು ವರ್ಗ ಈ ಬ್ಲ್ಯಾಕ್ ಫಂಗಸ್‍ನ ಹೆಚ್ಚು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಇಂತಹ ರೋಗಿಗಳು ಸೋಂಕಿನ ಸಂದರ್ಭದಲ್ಲಿ ತೀವ್ರ ರೀತಿಯಾದ ಶ್ವಾಸಕೋಶ ಹಾನಿಗೆ ತುತ್ತಾಗಿರುತ್ತಾರೆ. ನಾಳಗಳ ಮೂಲಕ ಆಮ್ಲಜನಕವನ್ನು ಸೇವನೆ ಮಾಡಿರುತ್ತಾರೆ. ಅಂತಹ ರೋಗಿಗಳಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿರುತ್ತದೆ.
ಸ್ಟೆರಾಯ್ಡ್ ಮಾತ್ರೆಗಳನ್ನು ತೆಗೆದುಕೊಂಡಿದ್ದವರು ಮತ್ತು ಡಯಾಬಿಟಿಸ್ ಮಟ್ಟ ತಹಬದಿಗೆ ಬಾರದಿರುವವರು,ಹೀಗೆ ಮೂರು ವರ್ಗದವರಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆಯ ಅಪಾಯ ಹೆಚ್ಚಾಗಿರುತ್ತದೆ ಎಂದು ಪಟ್ಟಿ ಮಾಡಲಾಗಿದೆ.
ಒಂದು ವೇಳೆ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡರೆ ಅಥವಾ ಸೈನಸ್, ಸೆಂಟ್ರಲ್ ನರ್ವಸ್ ಸಿಸ್ಟಂನಲ್ಲಿ ತೊಂದರೆ ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡಿ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯೋದು ಉತ್ತಮ ಎಂದಿದ್ದಾರೆ.