ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆಗೆ ತಾನೇ ನೀಡಿದ್ದ ಅನುಮತಿಯನ್ನು ತಾತ್ಕಾಲಿಕ ತಡೆಹಿಡಿಯುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳಸಾ-ಬಂಡೂರಿ ನಾಲೆ ನಿರ್ಮಾಣಕ್ಕೆ ನೀಡಿರುವ ಅನುಮತಿಯನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅಮಾನತ್ತಿನಲ್ಲಿಡುವ ಮೂಲಕ ರಾಜ್ಯಕ್ಕೆ ಮತ್ತೊಮ್ಮೆ ದ್ರೋಹ ಎಸಗಿದೆ. ವಾಜಪೇಯಿ ಕಾಲದಲ್ಲಿ ಪ್ರಾರಂಭವಾಗಿದ್ದ ರಾಷ್ಟ್ರೀಯ ಬಿಜೆಪಿ ಅನ್ಯಾಯದ ಪರಂಪರೆ ಮುಂದುವರೆಸಿದೆ ಎಂದಿದ್ದಾರೆ.
ಕಳಸಾ-ಬಂಡೂರಿ ನಾಲೆಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅಕ್ಟೋಬರ್‌ನಲ್ಲಿ ಹೇಳಿದ್ದರು. ಉಪಚುನಾವಣೆಯಲ್ಲಿ ರಾಜ್ಯದ ಜನರ ದಾರಿ ತಪ್ಪಿಸಲು ಸಚಿವರು ಈ ಸುಳ್ಳು ಹೇಳಿದ್ದರು. ಇದು ಕನ್ನಡಿಗರ ನಂಬಿಕೆಗೆ ಬಗೆದ ದ್ರೋಹ ಎಂದು ವಿವರಿಸಿದ್ದಾರೆ.
ಮಹದಾಯಿ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದು ಒಂದು ಕುಂಟು ನೆಪ. ಇದು ಕಳೆದ ಅಕ್ಟೋಬರ್‌ನಲ್ಲಿ ಸಚಿವ ಪ್ರಕಾಶ್ ಜಾವಡೇಕರ್ಗೆ ಗೊತ್ತಿರಲಿಲ್ಲವೇ? ಸತ್ಯ ಏನೆಂದರೆ ಗೋವಾ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ. ಮಹದಾಯಿ ನೀರು ಹಂಚಿಕೆಯಲ್ಲಿ ನ್ಯಾಯ ಕೋರಿ ಮುಖ್ಯಮಂತ್ರಿಯಾಗಿದ್ದ ನಾನು ದೆಹಲಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ದಿದ್ದೆ. ಆಗ ಯಡಿಯೂರಪ್ಪ ಸೇರಿದಂತೆ ಯಾವ ಬಿಜೆಪಿ ನಾಯಕರೂ ಪ್ರಧಾನಿ ಮೋದಿ ಎದುರು ತುಟಿಬಿಚ್ಚಿರಲಿಲ್ಲ. ಈಗಲೂ ಇವರು ಬಾಯಿ ಬಿಡಲಾರರು ಎಂದು ಟೀಕಿಸಿದ್ದಾರೆ.
ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆಗೆ ಸಿಎಂ ಯಡಿಯೂರಪ್ಪ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಚುನಾವಣಾ ಕಾಲದಲ್ಲಿ ಜನತೆಯನ್ನು ಮರುಳು ಮಾಡಿದ್ದಿರಲ್ಲಾ ರಾಜ್ಯ ಬಿಜೆಪಿ ನಾಯಕರೇ, ಭಾಗ್ಯದ ವಿಷಯ ಪಕ್ಕಕ್ಕಿಡಿ ಈಗಿನ ದೌರ್ಭಾಗ್ಯದಿಂದ ಕರ್ನಾಟಕವನ್ನು ಪಾರು ಮಾಡಿ. ನಮ್ಮ ನೆಲ-ಜಲ-ಭಾಷೆಗೆ ಕೇಂದ್ರದಿಂದ ಅನ್ಯಾಯವಾದಾಗ ಮೊದಲು ದನಿ ಎತ್ತಬೇಕಾದವರು ರಾಜ್ಯದ ಸಂಸದರು ಮತ್ತು ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಚಿವರು. ಇವರೆಲ್ಲರೂ ರಾಜ್ಯಕ್ಕೆ ನಿಷ್ಠರಾಗಿ ಕರ್ತವ್ಯ ಪಾಲನೆ ಮಾಡಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.