ಬೆಂಗಳೂರು: ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನವನ್ನು ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶಾಸಕಾಂಗ ಸಭೆ ಚರ್ಚೆಯ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೊನಾ ನಿರ್ವಹಣೆ, ಡಿ.ಜೆ. ಹಳ್ಳಿ ಗಲಭೆ, ಡ್ರಗ್ಸ್ ಹಗರಣ ಸೇರಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆ, ಪ್ರವಾಹ, ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ಮತ್ತಿತರ ಪ್ರಮುಖ ವಿಚಾರಗಳನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಸರ್ಕಾರನವನ್ನು ಇಕ್ಕಟ್ಟಿಗೆ ಸಿಲುಕಿಸುವ ಮೂಲಕ ವೈಫಲ್ಯಗಳನ್ನು ಜನತೆಯ ಮುಂದೆ ಅನಾವರಣ ಗೊಳಿಸಲು ಸಭೆ ನಿರ್ಧರಿಸಿದೆ. ಸಭೆಯಲ್ಲಿ ಚರ್ಚೆಯ ಕುರಿತು ಈ ಕೆಳಗಿನ ವಿವರಣೆಯನ್ನು ನೀಡಿದ್ದಾರೆ.
ಕೇವಲ 8 ದಿನಗಳ ಅವಧಿಗೆ ಅಧಿವೇಶನ ಕರೆಯಲಾಗಿದ್ದು, ಸಮಯ ವ್ಯರ್ಥ ಮಾಡದೆ ಕಲಾಪದ ಅವಧಿಯನ್ನು ಸರ್ಕಾರದ ವಿರುದ್ಧದ ಹೋರಾಟಕ್ಕೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಇಂದು ಇಡೀ ದಿನ ನಡೆದ ಶಾಸಕಾಂಗ ಸಭೆಯಲ್ಲಿ ಮಹತ್ವದ ವಿಚಾರಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆದು ಅಧಿವೇಶನ ಸಂದರ್ಭದಲ್ಲಿ ಅನುಸರಿಸಬೇಕಾದ ರಣತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು.
ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರವಾಗಿದೆ. ಈ ಬಗ್ಗೆ ಪಕ್ಷದ ವತಿಯಿಂದ ಈಗಾಗಲೇ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಸದನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಬೇಕಿದೆ.
ಡ್ರಗ್ಸ್ ಹಗರಣದ ಚರ್ಚೆಯನ್ನು ಸರ್ಕಾರ ಮುನ್ನೆಲೆಗೆ ತಂದು ಬೇರೆ ವಿಚಾರಗಳನ್ನು ಬದಿಗೆ ತರಿಸುವ ಪ್ರಯತ್ನ ಮಾಡಬಹುದು. ಇದಕ್ಕೆ ಅವಕಾಶ ಮಾಡಿಕೊಡಬಾರದು. ಎಂಟು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳು ಜನರಿಗೆ ಮನದಟ್ಟು ಆಗುವಂತೆ ಕಾರ್ಯತಂತ್ರ ರೂಪಿಸಬೇಕಿದೆ.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆಗಳಿಗೆ ತಿದ್ದುಪಡಿ ತಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅಭಿಪ್ರಾಯವನ್ನೇ ಕೇಳಿಲ್ಲ. ರಾಜ್ಯ ಸರ್ಕಾರವನ್ನು ಕೇಂದ್ರ ಮುನ್ಸಿಪಾಲಿಟಿ ರೀತಿ ನಡೆಸಿಕೊಳ್ಳುತ್ತಿದೆ. ಕಳೆದ ವರ್ಷವೂ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆಗ ಸಂತ್ರಸ್ಥರಾದವರಿಗೇ ಇನ್ನೂ ಪರಿಹಾರ ಸಿಕಿಲ್ಲ. ಈ ವರ್ಷ ಪ್ರವಾಹದಿಂದ ಹಾನಗೊಳಗಾದವರಿಗೂ ಪರಿಹಾರ ಎಂಬುದು ಕನಸಿನ ಮಾತಾಗಿಯೇ ಉಳಿದಿದೆ.
ಇನ್ನು ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಸರ್ಕಾರ ದಿವಾಳಿಯಾಗಿದೆ. ಪಿಂಚಣಿ ನೀಡಲೂ ಪರದಾಡುವ ಸ್ಥಿತಿಗೆ ಸರ್ಕಾರ ತಲುಪಿದೆ. 53 ಸಾವಿರ ಕೋಟಿ ರೂ. ಸಾಲ ಪಡೆಯುವುದಾಗಿ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಇದೀಗ ಮತ್ತೆ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ಲಾಕ್‍ಡೌನ್ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಗೆ, ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಣೆ ಮಾಡಿದ ಪರಿಹಾರವೂ ಸಿಕ್ಕಿಲ್ಲ. ಇದೆಲ್ಲವನ್ನೂ ಸದನದಲ್ಲಿ ಚರ್ಚಿಸಬೇಕಿದೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಘಟನೆಗೆ ಸರ್ಕಾರ, ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಯ ವೈಫಲ್ಯ ಮುಖ್ಯ ಕಾರಣ.
ಈ ಸಂಬಂಧ ಪಕ್ಷದ ವತಿಯಿಂದ ಈಗಾಗಲೇ ಸತ್ಯಶೋಧನಾ ಸಮಿತಿ ರಚನೆಯಾಗಿದ್ದು, ಸಮಿತಿ ನೀಡುವ ವರದಿ ಆಧರಿಸಿ ಸದನದಲ್ಲಿ ಚರ್ಚಿಸೋಣ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಸದನದಲ್ಲಿ ಮಂಡಿಸಬೇಕಾದ ನಿಲುವಳಿ ಸೂಚನೆ, ಗಮನ ಸೆಳೆಯುವ ಸೂಚನೆಗಳ ಬಗ್ಗೆಯೂ ಗಮನಹರಿಸಬೇಕಿದೆ.
ಪ್ರಶ್ನೆಗಳ ಬ್ಯಾಂಕ್ ಇದೇ ಮೊದಲ ಬಾರಿಗೆ ಪಕ್ಷ ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸಿದೆ. ಅದನ್ನು ಎಲ್ಲಾ ಶಾಸಕರು ಬಳಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.
ಕೊರೊನಾ ಅವ್ಯವಹಾರ ನಮಗೆ ಸಿಕ್ಕಿರುವ ಬಹುದೊಡ್ಡ ಅಸ್ತ್ರ. ಅದನ್ನು ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಪ್ರಯೋಗಿಸಬೇಕು ಎಂದು ಹೇಳಿದರು. ಸಾಮಾಜಿಕ ಜಾಲ ತಾಣವನ್ನು ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ ಅವರು, ಮುಂಬರುವ ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ, ಬಿಬಿಎಂಪಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆಯೂ ಮಾತನಾಡಿದರು. ಶಿರಾ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.