ಬೆಂಗಳೂರು: ಪ್ರಧಾನಿಯಾದ ದಿನದಿಂದಲೂ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ನರೇಂದ್ರ ಮೋದಿ ಈಗ ಬಂದು ಮೈಸೂರಲ್ಲಿ ಯೋಗ ಮಾಡುವ ಮೂಲಕ ಸಾಧಿಸುವುದೇನು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
2019 ಹಾಗೂ ನಂತರದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂತು. ಆ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದು ಜನರಿಗೆ ಸಾಂತ್ವನ ಹೇಳಲಿಲ್ಲ. ವಿಶೇಷ ಅನುದಾನ ನೀಡುವ ಕೆಲಸವೂ ಮಾಡಿಲ್ಲ.
ಮೈಸೂರು ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯಾ ಬ್ಯಾಂಕ್ ನಮ್ಮ ರಾಜ್ಯದ್ದು. ಈ ಬ್ಯಾಂಕುಗಳು ಈಗ ಇದೆಯಾ? ಈ ನಾಲ್ಕು ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡಿದ್ದು ಯಾರು? ಇವುಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದವು. ಇದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ?ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿದ್ದು, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ನಮ್ಮ ಸಾಧನೆ. ಅದನ್ನೂ ತಮ್ಮದೆಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಕೇಂದ್ರದ ಹಣಕಾಸು ಸಚಿವರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್. 14ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗದ ನಡುವೆ 1.07% ನಮ್ಮ ಪಾಲು ಕಡಿಮೆಯಾಯಿತು. ಇದು ಆದದ್ದು ನರೇಂದ್ರ ಮೋದಿ ಅವರ ಕಾಲದಲ್ಲಿ. ಹಾಗಾಗಿ 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ತಿರಸ್ಕಾರ ಮಾಡಿದ್ದರಿಂದ ನಮ್ಮ ರಾಜ್ಯಕ್ಕೆ ಸಿಗಲಿಲ್ಲ.
ಅಗ್ನಿಪಥ್ ಯೋಜನೆಯಡಿ ಯುವಕರನ್ನು ಕೇವಲ 4 ವರ್ಷಕ್ಕೆ ಸೈನ್ಯಕ್ಕೆ ನೇಮಕ ಮಾಡಿಕೊಳ್ತೀವಿ ಎಂದು ಸರ್ಕಾರ ಹೇಳುತ್ತಿದೆ. 4 ವರ್ಷ ಕೆಲಸ ಮಾಡಿದ ಮೇಲೆ ಅವರಿಗೆ ಪಿಂಚಣಿ ಸಿಗಲ್ಲ, ಆಮೇಲೆ ನಮ್ಮ ಭವಿಷ್ಯವೇನು ಎಂದು ಯುವಕರು ಪ್ರಶ್ನೆ ಮಾಡುತ್ತಿದ್ದಾರೆ. ಸೈನ್ಯ ಸೇರಲು ಯುವಕರು 10ನೇ ತರಗತಿ ಪಾಸ್ ಆಗಿರಬೇಕು ಎಂದೂ ಇದೆ.
ಸೈನ್ಯದಲ್ಲಿ 4 ವರ್ಷ ಕೆಲಸ ಮಾಡಬಹುದು. ಅದು ಮುಗಿದ ಮೇಲೆ ಅವರನ್ನು ಕೆಲಸದಿಂದ ತೆಗೆಯಲಾಗುತ್ತೆ. ಆಗ ಅವರು ಶಿಕ್ಷಣವನ್ನು ಮುಂದುವರೆಸಲು ಆಗಿರಲ್ಲ, ಪಿಂಚಣಿಯೂ ಸಿಗಲ್ಲ. ಇದು ಬಹಳ ಅವೈಜ್ಞಾನಿಕವಾಗಿದೆ. ಹಾಗಾಗಿ, ಯುವ ಜನರು ಈ ಯೋಜನೆ ಬೇಡ ಎಂದು ಹೇಳ್ತಿದ್ದಾರೆ. ಆದರೆ, ಸರ್ಕಾರ ನಾವು ಇದನ್ನು ಮಾಡಿಯೇ ಮಾಡ್ತೀವಿ ಎಂದು ಹಠ ಹಿಡಿದು ಕೂತಿದ್ದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ: ಅಗ್ನಿಪಥ್ ಕಿಚ್ಚು.. ಬೆಳಗಾವಿಯಲ್ಲಿ ಪ್ರತಿಭಟನೆಗೆ ಬಂದ ನೂರಾರು ಯುವಕರು ದೇವಸ್ಥಾನದಲ್ಲಿ ಲಾಕ್