ಬೆಂಗಳೂರು: ಸದನ ನಡೆಸಲು ಬಿಜೆಪಿ ನಾಯಕರಿಗೆ ಆಸಕ್ತಿ ಇಲ್ಲ. ಕೆಟ್ಟ ಬಜೆಟ್ ಮಂಡಿಸಿದ್ದಾರೆ. ಇದನ್ನು ಬಹಿರಂಗಪಡಿಸುತ್ತಾರೆಂಬ ಭಯದಿಂದ ಈ ನಾಟಕ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ಸಮಸ್ಯೆ ಚರ್ಚೆ ಮಾಡಬೇಕಿದೆ. ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಹೀಗಾಗಿ ನಾವು ಒಂದು ಸ್ಟೆಪ್ ಹಿಂದೆ ಬಂದು ಸದನದಲ್ಲಿ ಮಾತನಾಡಲು ಬಿಟ್ಟಿದ್ದೇವೆ. ಆದರೆ ಅವರಿಗೆ ಸದನ ನಡೆಸಲು ಇಷ್ಟ ಇಲ್ಲ ಎಂದು ಹೇಳಿದರು.
ನಂತರ ಮಾತನಾಡಿದ ಅವರು, ನನಗೆ ಸ್ಪೀಕರ್ ಮೊದಲು ಮಾತನಾಡಲು ಅವಕಾಶ ಕೊಟ್ಟಿದ್ದರು. ಆದರೆ ಸದನದಲ್ಲಿ ನನಗೆ ಮಾತನಾಡಲು ಬಿಡಲಿಲ್ಲ. ಈಗ ಸ್ಪೀಕರ್ ಚೇಂಬರ್ ನಲ್ಲಿ ಹೊಸ ವರಸೆ ತೆಗೆದಿದ್ದಾರೆ. ಸುಧಾಕರ್ ಅವರು ಸಂವಿಧಾನದ ಮೇಲೆ ಚರ್ಚೆ ಅರ್ಧ ಆಗಿದೆ. ಅದನ್ನು ಮುಂದುವರೆಸಲೆಂದು ಈಗ ಹೇಳುತ್ತಿದ್ದಾರೆ ಎಂದರು. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ಸುಧಾಕರ್ ಪೀಠಕ್ಕೆ ಅಗೌರವ ತೋರುವುದರ ಜೊತೆಗೆ ರಮೇಶ್ ಕುಮಾರ್ ಅವರಿಗೂ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಟಿವಿ ಚಾನಲ್ಗಳನ್ನೇ ಹೊರಗೆ ಇಟ್ಟ ಮೇಲೆ ಇನ್ನೇನು ಹೇಳಬೇಕು. ಇವರಿಗೆ ವಾಕ್ ಸ್ವಾತಂತ್ರ್ಯದ ಮೇಲೆ ನಂಬಿಕೆ ಇಲ್ಲ ಎಂದ ಅವರು,ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇಮಕ ಆಗಿದೆ.ಅವರು ಸೇರಿದಂತೆ ನೂತನ ಕಾರ್ಯಾಧ್ಯಕ್ಷರಿಗೆ ನಾನು ಅಭಿನಂದನೆ ತಿಳಿಸಿದ್ದೇನೆ. ಶಾಸಕಾಂಗ ಪಕ್ಷದ ನಾಯಕ ಬೇರೆ, ವಿಪಕ್ಷ ನಾಯಕ ಬೇರೆ ಅಂತ ಎಲ್ಲೂ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.