ಬೆಂಗಳೂರು : ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಸಲಗ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಅತಿಥಿಯಾಗಿ ಅಗಮಿಸಿ ಕ್ಯಾಮರಾ ಚಾಲನೆ ನೀಡಿದ, ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗಿನ ಚಲನಚಿತ್ರಗಳ ಟ್ರೆಂಡ್ ಬಗ್ಗೆ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಚಿಕ್ಕಂದಿನಲ್ಲಿದ್ದಾಗ, ದಿನಕ್ಕೆ ಒಂದಾದರೂ ಸಿನಿಮಾ ನೋಡುತ್ತಿದ್ದೆ. ಏನಾದರೂ ಅಗಲಿ, ನಿಮಾ ನೋಡದೆ ನಾನು ಮಲಗುತ್ತಿರಲಿಲ್ಲ. ಆದರೀಗ ರಾಜಕೀಯ ಒತ್ತಡದಿಂದ ಎರಡು ವರ್ಷಕ್ಕೆ ಒಂದು ಸಿನಿಮಾ ನೋಡುವಂತಾಗಿದೆ ಎಂದರು.
ಚಿತ್ರ ನಿರ್ದಶಕನಿಗೆ ಇರಬೇಕಾದ ಕೆಲವು ಮುಖ್ಯವಾದ ಗುಣಲಕ್ಷಣಗಳ ಬಗ್ಗೆ ಮಾತನಾಡುತ್ತಾ, ನಿರ್ದೇಶನ ಮಾಡಬೇಕಿದ್ದರೆ ಎಲ್ಲವನ್ನೂ ತಿಳಿದುಕೊಂಡಿರಬೇಕು. ಯಾವುದೇ ಚಿತ್ರವಾಗಿರಲಿ, ನಿರ್ದೇಶಕನ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತೆ. ನಿರ್ದೇಶಕನಾದವನಿಗೆ ಯಾವ ವಿಷಯವನ್ನು ಜನರಿಗೆ ಹೇಳಬೇಕು ಎಂಬುದು ಮೊದಲು ತಿಳಿದಿರಬೇಕು ಎಂದರು.
ಪ್ರತಿ ಸಿನಿಮಾದ ಯಶಸ್ಸು ನಿರ್ದೇಶಕನ ಮೇಲೆ ಅವಲಂಬಿತವಾಗಿರುತ್ತದೆ. ಜನರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಬೇಕು. ದುನಿಯಾ ವಿಜಿ ಈಗ ನಟನಾಗಿ ಯಶಸ್ವಿಯಾದ ಮೇಲೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಇತ್ತೀಚಿನ ಸಿನಿಮಾಗಳಲ್ಲಿ ಮಸಾಲೆ ಅಂಶ ಜಾಸ್ತಿ ಆಗುತ್ತಿದೆ. ಅದ್ದರಿಂದ ಹೆಚ್ಚು ದಿನ ಸಿನಿಮಾಗಳು ಚಿತ್ರಮಂದಿರದಲ್ಲಿ ನಿಲ್ಲುತ್ತಿಲ್ಲ. ಯಾವುದೆೇ ಚಿತ್ರ ಸಿನಿಮಾ ನೀತಿ, ಧಾರ್ಮಿಕ ವಿಚಾರವಾಗಿ ಒಂದೊಳ್ಳೆಯ ಸಂದೇಶ ಸಾರುವುದರ ಜೊತೆಗೆ ಮನರಂಜನೆಯನ್ನೂ ನೀಡಬೇಕು ಎಂದ ಸಲಹೆ ಕೊಟ್ಟರು.
ಸಿನಿಮಾ ಬದುಕಿನ ಮೌಲ್ಯಗಳು, ಸಾಮಾಜಿಕ ಮೌಲ್ಯಗಳನ್ನು ಹೇಳಬೇಕು. ಮನರಂಜನೆಯೇ ಮುಖ್ಯವಾಗಿರಬಾರದು ಎಂದು ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿರುವ ದುನಿಯಾ ವಿಜಿಗೆ ಮಾಜಿ ಮುಖ್ಯಮಂತ್ರಿ ಕಿವಿ ಮಾತು ಹೇಳಿದ್ರು.