ಬೆಂಗಳೂರು: ಮಾರ್ಚ್ 21 ರಂದು ಕಲಬುರಗಿಯಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ರಾಜ್ಯದ ಪ್ರಮುಖ ನಾಲ್ಕು ವಿಭಾಗಗಳಲ್ಲಿ ಹಂತಹಂತವಾಗಿ ಸಮಾವೇಶ ನಡೆಸಲು ತೀರ್ಮಾನಿಸಿರುವ ಅವರು, ಮೊದಲ ಸಮಾವೇಶವನ್ನು ಕಲಬುರಗಿಯಲ್ಲಿ ಹಾಗೂ ನಂತರದ ಸಮಾವೇಶಗಳನ್ನು ಬೆಂಗಳೂರು ಮಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.
ಈ ಹಿಂದೆ ಮಾರ್ಚ್ 13 ರಂದು ಕಲಬುರಗಿಯಲ್ಲಿ ಕುರುಬ ಸಮುದಾಯದ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು. ಇಲ್ಲಿ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಗೆದ್ದ ಕುರುಬ ಸಮುದಾಯದವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಮುದಾಯದ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅಂದು ಅಮವಾಸ್ಯೆ ಆಗಿರುವ ಹಿನ್ನೆಲೆ ದಿನಾಂಕ ಬದಲಿಸುವಂತೆ ಕಲಬುರಗಿ ಭಾಗದ ನಾಯಕರು ಸಿದ್ದರಾಮಯ್ಯಗೆ ಮನವಿ ಮಾಡಿದರು. ಇಂದು ಬೆಂಗಳೂರಿನ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಕಲಬುರಗಿ ಭಾಗದ ಕುರುಬ ಸಮುದಾಯದ ಮುಖಂಡರು ದಿನಾಂಕ ಬದಲು ಮಾಡುವಂತೆ ಮನವಿ ಮಾಡಿದ್ದಾರೆ.
ಓದಿ: ಇಂದು ಮಹತ್ವದ ಸಚಿವ ಸಂಪುಟ ಸಭೆ: ಬಜೆಟ್, ಮೀಸಲಾತಿ ವಿಷಯ ಚರ್ಚೆ
ಈ ಹಿನ್ನೆಲೆ ಮಾರ್ಚ್ 21ಕ್ಕೆ ನಡೆಸಲು ಸಿದ್ದರಾಮಯ್ಯ ಸ್ಥಳದಲ್ಲೇ ನಿರ್ಧಾರ ಕೈಗೊಂಡಿದ್ದಾರೆ. ಇಂದು ಕಲಬುರಗಿಯಿಂದ ಬಂದಿದ್ದ ಕುರುಬ ಸಮುದಾಯದವರಿಂದ ಸಿದ್ದರಾಮಯ್ಯ ಮನವೊಲಿಕೆ ಆಗಿದ್ದು, ಸಮಾವೇಶ 13ರ ಬದಲು 21 ರಂದು ನಡೆಯಲಿದೆ.
ಎಸ್. ನಾರಾಯಣ್ ಭೇಟಿ:
ನಟ ನಿರ್ಮಾಪಕ ಹಾಗೂ ನಿರ್ದೇಶಕ ಎಸ್. ನಾರಾಯಣ್ ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಸಿದ್ದರಾಮಯ್ಯ ಮೈಸೂರಿಗೆ ತೆರಳುವ ಮುನ್ನ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನಾರಾಯಣ್, ನಿವಾಸದ ಒಳಗೆ ತೆರಳಿ ಕೆಲಕಾಲ ಮಾತುಕತೆ ನಡೆಸಿ ವಾಪಸ್ಸಾದರು. ಯಾವ ಕಾರಣಕ್ಕೆ ಬಂದಿದ್ದು ಮತ್ತು ಏನು ಮಾತುಕತೆ ನಡೆದಿದೆ ಎಂಬ ಮಾಹಿತಿಯನ್ನು ನೀಡಿಲ್ಲ.
ದೆಹಲಿಗೆ ಹೋಗಿ ಬಂದಿರುವ ಸಿದ್ದರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಇಂದು ಪ್ರಯಾಣ ಬೆಳೆಸಿದ್ದು, ಮೂರುದಿನ ಮೈಸೂರಿನಲ್ಲಿಯೇ ಇರಲಿದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಅವರು ಇಂದು ಬೆಳಗ್ಗೆ ನಿವಾಸದಿಂದ ತೆರಳುವಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮಂಡ್ಯ ಜಿಲ್ಲೆಯ ಅಭಿಮಾನಿ ಒಬ್ಬರು ತಮ್ಮ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಅಭಿಮಾನಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಬೆಂಗಳೂರಿನ ನಿವಾಸದಿಂದ ತೆರಳಿದ್ದಾರೆ. ಈ ಸಂದರ್ಭ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹೌದು ಅಭಿಮಾನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇನೆ ಎಂದು ಚುಟುಕಾಗಿ ಉತ್ತರಿಸಿದರು. ಇದಲ್ಲದೆ ದಿಲ್ಲಿಗೆ ತೆರಳಿದ ವಿಚಾರದ ಕುರಿತು ಹಾಗೂ ಕುರುಬ ಸಮುದಾಯದ ಸಮಾವೇಶದ ಕುರಿತು ಸಹ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ನಿರಾಕರಿಸಿದರು.