ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಬೆಳಗ್ಗೆ ಶಿವಾನಂದ ವೃತ್ತದ ಸಮೀಪವಿರುವ ಸರ್ಕಾರಿ ನಿವಾಸದಿಂದ ಹೊರಟು ಮೊದಲು ಮಳೆ ನೀರಿನಿಂದ ಆವೃತವಾಗಿರುವ ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ ಬಡಾವಣೆಗೆ ತೆರಳಿ, ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಜೊತೆಗಿದ್ದರು. ಬಳಿಕ ಬೆಳ್ಳಂದೂರು ರಿಂಗ್ ರಸ್ತೆಯಲ್ಲಿ ಮಳೆಯಿಂದಾಗಿರುವ ಹಾನಿ ವೀಕ್ಷಿಸಿದರು.
ನಗರದ ವಿವಿಧ ಭಾಗಗಳಲ್ಲಿ ಓಡಾಡಿ ಸಮಸ್ಯೆ ಅರಿಯುತ್ತಿರುವ ಅವರು, ಜನರನ್ನು ಸಂದರ್ಶಿಸಿ ಅಹವಾಲು ಆಲಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಬೆಂಗಳೂರಿನಲ್ಲಿ ಟೆಕ್ಕಿಗಳೇ ಹೆಚ್ಚಿರುವ ಪ್ರದೇಶದಲ್ಲಿ ಮಳೆ ಸಾಕಷ್ಟು ಹಾನಿ ಮಾಡಿದೆ. ಈ ಸಮಸ್ಯೆಯಿಂದ ಕಂಗೆಟ್ಟಿರುವ ಸಾಫ್ಟ್ವೇರ್ ಕಂಪನಿಗಳು ತಾವು ಬೆಂಗಳೂರು ತೊರೆಯುವುದಾಗಿ ಸರ್ಕಾರಕ್ಕೆ ಈ ಮೊದಲು ಎಚ್ಚರಿಕೆ ಸಹ ನೀಡಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರು ಈ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ.
ನಗರದ ಸಾಕಷ್ಟು ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಈಗಲೂ ಜಲಾವೃತಗೊಂಡಿವೆ. ಸಾವುನೋವು ಸಹ ಸಂಭವಿಸಿವೆ. ಈ ಮಧ್ಯೆ, ಸರ್ಕಾರದ ವಿರುದ್ಧ ತಮ್ಮ ವಾದ ಮಂಡಿಸಲು ಅಗತ್ಯ ಮಾಹಿತಿ ಸಂಗ್ರಹಿಸುವ ಸಲುವಾಗಿ ನಗರ ಪ್ರದಕ್ಷಿಣೆಯನ್ನು ಸಿದ್ದರಾಮಯ್ಯ ಕೈಗೊಂಡಿದ್ದಾರೆ.
ಮುಂದಿನ ಸೋಮವಾರದಿಂದ ಆರಂಭವಾಗುವ ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಬೆಂಗಳೂರು ನಗರ ಹಾಗೂ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿರುವ ಅನಾಹುತಕ್ಕೆ ಪರಿಹಾರ ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಹೋರಾಟ ಕೈಗೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಇದಕ್ಕೆ ಪೂರಕ ಮಾಹಿತಿ ಹಾಗೂ ಆಧಾರ ಸಂಗ್ರಹಿಸಲು ಮತ್ತು ಪರಿಸ್ಥಿತಿಯನ್ನು ಖುದ್ದು ಅವಲೋಕಿಸಲು ಸಿದ್ದರಾಮಯ್ಯ ನಗರ ಪ್ರದಕ್ಷಿಣೆಯಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ತಗ್ಗಿದ ಮಳೆ, ಟ್ರಾಫಿಕ್ ಜಾಮ್.. ತೊಂದರೆಗೆ ಸಿಲುಕಿದ ಸಾವಿರಾರು ಕುಟುಂಬಗಳು