ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕಾಗಿ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರದರ್ಶನ ಪರದೆಗಳ ಸಂಖ್ಯೆ ಕಡಿತ ಮಾಡುತ್ತಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಜೇಮ್ಸ್ ಚಿತ್ರದ ನಿರ್ಮಾಪಕರು ನನ್ನನ್ನು ಭೇಟಿಯಾಗಿ, ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ಜೇಮ್ಸ್ ಚಿತ್ರ ನಡೆಯುತ್ತಿರುವ ಥಿಯೇಟರ್ನಲ್ಲಿ ಶೋ ನಿಲ್ಲಿಸಲು ಒತ್ತಡ ಹಾಕುತ್ತಿದ್ದಾರೆ. ಕಾಶ್ಮೀರಿ ಫೈಲ್ಸ್ ಚಿತ್ರಕ್ಕಾಗಿ ಒತ್ತಡ ತರುತ್ತಿದ್ದಾರೆ ಎಂದು ನೋವು ತೋಡಿಕೊಂಡರು. ನಿರ್ಮಾಪಕರು ಮೊದಲೇ ಥಿಯೇಟರ್‌ಗಳಿಗೆ ಅಡ್ವಾನ್ಸ್ ಕೊಟ್ಟಿರುತ್ತಾರೆ, ಬಿಜೆಪಿಯವರು ಬಲಾತ್ಕಾರದಿಂದ ಜೇಮ್ಸ್ ಚಿತ್ರ ತೆಗೆಸುವ ದೌರ್ಜನ್ಯ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಸಿನಿಮಾ ನೋಡಲು ಆಸಕ್ತಿಯಿಂದ ಇದ್ದಾರೆ. ಅಂತಹ ಸಂದರ್ಭದಲ್ಲಿ ಬಲಾತ್ಕಾರದಿಂದ ಸಿನಿಮಾ ತೆಗೆಸುವುದು, ಮಲ್ಟಿಫ್ಲೆಕ್ಸ್‌ಗಳಲ್ಲಿ ಪ್ರದರ್ಶನ ಪರದೆಗಳನ್ನು ಕಡಿತಗೊಳಿಸುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ದೇಶವನ್ನು ಮತ್ತೆ ಮುನ್ನಡೆಸುವ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ: ಸಿದ್ದರಾಮಯ್ಯ
ಬಿಜೆಪಿಯವರು ಸಜ್ಜನರ ರೀತಿ ಆಡುತ್ತಾರೆ. ನಾವು ಯಾರನ್ನೂ ಸಿನಿಮಾ ನೋಡಬೇಡಿ ಅನ್ನೋದಿಲ್ಲ. ಯಾರಿಗೆ ಇಷ್ಟ ಇದೆಯೋ ಅವರು ನೋಡಲಿ. ಆದರೆ, ದೌರ್ಜನ್ಯ ಮಾಡಬಾರದು ಅಷ್ಟೇ ಎಂದರು.
'ತೆರಿಗೆ ವಿನಾಯಿತಿ ನೀಡಲಿ': ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಕನ್ನಡದ ಜೇಮ್ಸ್ ಚಿತ್ರಕ್ಕೂ ತೆರಿಗೆ ವಿನಾಯತಿ ನೀಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಮುಸ್ಲಿಮರ ಮಳಿಗೆಗಳಿಗೆ ಜಾತ್ರೆಗಳಲ್ಲಿ ಅವಕಾಶ ನಿಷೇಧ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಈ ರೀತಿ ಅವಕಾಶ ನಿರಾಕರಿಸುವುದು, ಮಳಿಗೆ ನೀಡದೇ ಇರುವುದು, ಅಂಗಡಿ ಟೆಂಡರ್ ನಿರಾಕರಿಸುವುದು ತಪ್ಪು. ಇದು ಫ್ರೀ ಟ್ರೇಡಿಂಗ್ಗೆ ವಿರೋಧ. ನಮ್ಮ ದೇಶದಲ್ಲಿ ಫ್ರೀ ಟ್ರೆಡಿಂಗ್ ಇದೆ. ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ. ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸ ಎಂದರು.