ಬೆಂಗಳೂರು : ನಗರದ ಫ್ರೀಡಂ ಪಾರ್ಕ್ನಲ್ಲಿ ರೈತರು ನಡೆಸುತ್ತಿರುವ ಸತ್ಯಾಗ್ರಹ ನಿರತ ಸ್ಥಳಕ್ಕೆ ಆಗಮಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದೇ ವೇಳೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೂಡ ಬಂದು, ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡರು. ಬಳಿಕ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಬಿಜೆಪಿ ದುಡ್ಡಿದ್ದವನೇ ಭೂಮಿ ಒಡೆಯ ಎಂಬ ಕಾನೂನನ್ನ ಜಾರಿಗೆ ತರಲು ಹೊರಟಿದೆ ಎಂದು ಲೇವಡಿ ಮಾಡಿದರು.
ಯಾರು ಕೃಷಿ ಕಾರ್ಮಿಕರಿದ್ದಾರೋ ಅವರಿಗೂ ಭೂಮಿಗೂ ತಲತಲಾಂತರದ ಸಂಬಂಧವಿದೆ. ರಾಜರು, ಪಾಳೇಗಾರರು ಇದ್ದ ಕಾಲದಲ್ಲಿ ಕೃಷಿಯೇ ಆದಾಯವಾಗಿತ್ತು. ಆನಂತರ ಕೈಗಾರಿಕಾ ಕ್ರಾಂತಿ, ಸೇವಾ ಕ್ರಾಂತಿ ಆಯ್ತು. ಈಗ ಕೃಷಿ ಕ್ಷೇತ್ರದ ಆದಾಯ ಕಡಿಮೆಯಾಗಿದೆ. ಸದ್ಯ ಆದಾಯ ಸೇವಾ ವಲಯದಿಂದ 60%, ಕೃಷಿಯಿಂದ 20% ಬರುತ್ತಿದೆ. ಬಸವಾದಿ ಶರಣರು ಈ ಬಗ್ಗೆ ಸಾಕಷ್ಟು ತಿಳುವಳಿಕೆಯ ಮಾತುಗಳನ್ನಾಡಿದ್ದಾರೆ. ಕಸ ಗುಡಿಸುವವನು ಒಂದೇ, ಪ್ರಧಾನಿಯಾದವನೂ ಒಂದೇ.. ಸಮಾಜದಲ್ಲಿ ಶ್ರೇಣಿ ವ್ಯವಸ್ಥೆ ಇರಬಾರದು ಎಂದು ಆಳುವ ಸರ್ಕಾರದಲ್ಲಿನ ಅವ್ಯವಸ್ಥೆ ಬಗ್ಗೆ ಕಿಡಿ ಕಾರಿದರು.
ದೇವರಾಜ ಅರಸು ಇದ್ದಾಗ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಯ್ತು. ಉಳುವವನೇ ಭೂಮಿಗೆ ಒಡೆಯ ಕಾನೂನು ಜಾರಿಗೆ ತರಲಾಯ್ತು. 1974ರಲ್ಲಿ ಅರಸು ಸೆಕ್ಷನ್ 63ಗೆ ತಿದ್ದುಪಡಿ ತಂದರು. ಅದಕ್ಕೆ 79 ಎ, ಬಿ, ಸಿ ಸೆಕ್ಷನ್ ಸೇರಿಸಿದರು. ಇದರ ಪ್ರಕಾರ ರೈತರು ಮಾತ್ರ ಭೂಮಿ ಹೊಂದಬೇಕು ಎಂಬ ನಿಯಮ ತರಲಾಗಿತ್ತು. ಈಗ ಎಲ್ಲ ಯೂನಿಟ್ ಡಬಲ್ ಮಾಡಿದ್ದಾರೆ. 79 ಎ, ಬಿ, ಸಿ ಯನ್ನ ಸಂಪೂರ್ಣ ಡ್ರಾಪ್ ಮಾಡಲು ಹೊರಟಿದ್ದಾರೆ. ಸೆಕ್ಷನ್ 80 ಡ್ರಾಪ್ ಮಾಡಿದ್ದಾರೆ. ಈ ಪ್ರಕಾರ ಯಾರು ಬೇಕಾದ್ರೂ ಜಮೀನು ಕೊಳ್ಳಬಹುದು. ಈ ಪ್ರಕಾರ ಮತ್ತೆ ಜಮೀನ್ದಾರಿ ಪದ್ಧತಿ ಜಾರಿಗೊಳಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಈ ಭೂಸುಧಾರಣಾ ಕಾಯ್ದೆಯ ವಿರುದ್ಧ ಇದೆ. ಪಕ್ಷದಲ್ಲಿ ಇದಕ್ಕೆ ಯಾರದ್ದೂ ಅಪಸ್ವರ ಇಲ್ಲ. ಎಪಿಎಂಸಿ ಕಾಯ್ದೆ ಕೇಂದ್ರ ತಂದಿದ್ದಲ್ಲ. ಇದಕ್ಕೂ ಕೇಂದ್ರಕ್ಕೂ ಸಂಬಂಧವೇ ಇಲ್ಲ. ಇದು ರಾಜ್ಯ ಪಟ್ಟಿಯಲ್ಲಿ ಬರುವ ವಿಚಾರ. ಆದರೆ, ಕೇಂದ್ರ ಬಲವಂತವಾಗಿ ರಾಜ್ಯದ ಸ್ವಾಯತ್ತತೆ ಮೊಟಕುಗೊಳಿಸುತ್ತಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.