ಬೆಂಗಳೂರು: ಬಿಜೆಪಿಯಲ್ಲಿರುವವರು ಎಲ್ಲರೂ ಕಳ್ಳರೇ, ಯಾರೂ ಸಾಚಾ ಅಲ್ಲ. ರಮೇಶ್ ಜಾರಕಿಹೊಳಿ ವಿಡಿಯೋ ನಾನು ನೋಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾಫ್ ಹಾರ್ಟೆಡ್ಲಿ ಹೇಳಬಾರದು. ಪೂರ್ತಿ ತಿಳಿದುಕೊಂಡು ಮಾತಾಡುತ್ತೇನೆ. ನಮ್ಮ ಪಕ್ಷ ಬಿಟ್ಟು ಹೋದವರ ಬಗ್ಗೆ ಸಿಂಪತಿ ಬರುತ್ತಾ? ಸಂಪೂರ್ಣ ಮಾಹಿತಿ ತೆಗೆದುಕೊಂಡು ಮಾತಾಡುತ್ತೇನೆ. ಸಚಿವ ಸುಧಾಕರ್ಗೆ ಸಿಡಿ ಇದೆ ಎಂದು ಗೊತ್ತಿರಬೇಕು. ಹಾಗಾಗಿ, ಷಡ್ಯಂತ್ರ ಅಡಗಿದೆ ಎಂದಿದ್ದಾರೆ. ಈ ಸರ್ಕಾರದ ಮೇಲೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವ ಹಾಗಿಲ್ಲ. ಹೊಸ ಕಾರ್ಯಕ್ರಮ ಮಾಡಲು ಹಣ ಇಲ್ಲ. ಹಳೆ ಯೋಜನೆ ಮುಂದುವರಿಸಲು ದುಡ್ಡಿಲ್ಲ. ಹೊರ ಬಂದ ನಂತರ ಬಜೆಟ್ ಜನಪ್ರಿಯನ ಅಲ್ವ ಅಂತ ಗೊತ್ತಾಗಲಿದೆ ಎಂದರು.
6 ಮಂದಿ ಸಚಿವರು ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ತಡೆ ತಂದಿರುವ ವಿಚಾರ ನನಗೆ ಗೊತ್ತಿಲ್ಲ, ನಾನು ಇನ್ನೂ ನೋಡಿಲ್ಲ. ನೋಡಿದ ನಂತರ ಮಾತನಾಡುವೆ. ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ. ಯಾರೂ ಸಾಚಾ ಇಲ್ಲ ಎಂದು ಹೇಳಿದರು.
ಸಂಗಮೇಶ್ವರ್ ಪುತ್ರನನ್ನು ಬಂಧಿಸಲಾಗಿದೆ. ಸುಳ್ಳು ಕೇಸ್ ಹಾಕಿ ಹೆದರಿಸಲಾಗ್ತಿದೆ. ಈಶ್ವರಪ್ಪ, ಯಡಿಯೂರಪ್ಪ ಪುತ್ರ ಈ ರೀತಿ ಮಾಡಿದ್ದಾರೆ. ಸುಳ್ಳು ಮೊಕದ್ದಮೆ ಹಾಕಿದ್ದಾರೆ. ಅಧಿವೇಶನದಲ್ಲಿ ಈ ವಿಚಾರವಾಗಿ ಮಾತನಾಡುವೆ. ನಾನು ಯಾರಿಗೂ ಸಿಂಪತಿ ತೋರಲ್ಲ, ಇದ್ದಿದ್ದು ಇದ್ದಂಗೆ ಹೇಳುವವನು ನಾನು. ನಮ್ಮ ಪಕ್ಷ ಬಿಟ್ಟು, ಸರ್ಕಾರ ಬೀಳಿಸಿ ಹೋದವರ ಬಗ್ಗೆ ಸಿಂಪತಿ ಬರುತ್ತಾ? ಎಂದು ಪ್ರಶ್ನಿಸಿದರು.
ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಮಹಿಳೆಯರಿಗೆ, ಎಲ್ಲರಿಗೂ ಒತ್ತು ಕೊಡುತ್ತೇವೆ ಅಂತಾರೆ. ಆದರೆ ಯೋಜನೆಗಳು ಅನುಷ್ಠಾನ ಆಗಲ್ಲ. ರೈತರ ಸಾಲ ಮನ್ನಾ, 500 ಕೋಟಿ ಆವರ್ತ ನಿಧಿ ಇಡುವುದಾಗಿ ಹೇಳಿದ್ದರು, ಇಟ್ಟರಾ? ಯಡಿಯೂರಪ್ಪನವರ ಮನೆ ದೇವರು ಸುಳ್ಳು. ಜನ ಹೇಸಿಗೆ ಪಡುವಷ್ಟು ರಾಜಕಾರಣ ಹೀಗಾಗಿರಲಿಲ್ಲ. ಯಾರೋ ಮಾಡುವ ತಪ್ಪಿಗೆ ಜನ ರಾಜಕಾರಣಿಗಳನ್ನು ಲಫಂಗರು ಎಂದು ಶಪಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.