ಬೆಂಗಳೂರು: ಸೋಶಿಯಲ್ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಸಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತಲೆತಗ್ಗಿಸುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. 75 ವರ್ಷಗಳ ಕಾಲ 65 ವರ್ಷ ಕಾಂಗ್ರೆಸ್ನವರು ಸರ್ಕಾರ ಹೇಗೆ ನಡೆಸಿದ್ರು ಎನ್ನುವುದು ಬಟಾಬಯಲಾಗಿದೆ ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಣ, ಹೆಂಡ ಜನರಿಗೆ ಹಂಚಿದ್ದೇವೆ ಅನ್ನೋದು ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಬಹಿರಂಗವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆ ಮತದಾರರನ್ನು ಅವಮಾನ ಮಾಡಿದಂತಿದೆ ಎಂದು ಟೀಕಿಸಿದರು.
ಯಾರು ನಮ್ಮನ್ನು ವೋಟ್ ಹಾಕಿ ವಿಧಾನಸೌಧದಲ್ಲಿ ಕೂರಿಸುತ್ತಾರೋ, ಅವರನ್ನೇ 500 ರೂಪಾಯಿ ಕೊಟ್ಟು ಕರೆಸಬೇಕಾಗಿದೆ ಅನ್ನೋ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಯಾವ ರೀತಿ ಹಣದ ಹೊಳೆ ಹರಿಸುತ್ತಾರೆ. ಕಾರ್ಯಕ್ರಮಕ್ಕೆ ಬರುವುದಕ್ಕೆ 500 ರೂಪಾಯಿ ಅಂದ್ರೆ, ಮತ ಪಡೆಯಲು ಇನ್ನೆಷ್ಟು ಕೊಡ್ತಾರೆ ಎಂದು ಅಶೋಕ್ ಪ್ರಶ್ನಿಸಿದರು.
ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಸಿದ್ದರಾಮಯ್ಯನವರ ಹೇಳಿಕೆ ಪಕ್ಕಾ ಪ್ರೂಪ್ ಆಗಿ ಹೋಯ್ತು. ಜನರ ತೆರಿಗೆ ಲೂಟಿ ಹೊಡಿತಾರೆ ಎಂದು ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಿಂದೆ ಹೇಳಿದ್ದು ಸತ್ಯವಾಗಿದೆ. ಅವರಿಗೆ ಅಭಿನಂದನೆ ಸಲ್ಲಿಸಬೇಕು. ನೇರವಾಗಿ ಲೂಟಿ ಹೊಡೆಯುತ್ತಿದ್ದಾರೆ ಎನ್ನುವುದು ಪಕ್ಕಾ ಆಯ್ತು. ಸಮಾವೇಶಕ್ಕೆ ಇಷ್ಟು ಹಣ ಖರ್ಚು ಮಾಡುತ್ತಾರೆ ಎಂದರೆ, ಇನ್ನು ಚುನಾವಣೆಗೆ ಕೋಟಿ, ಕೋಟಿ ಹಣ ಖರ್ಚು ಮಾಡುತ್ತಾರೆ. ಆ ಹಣ ಎಲ್ಲಿಂದ ಬರುತ್ತದೆ. ಹೊರ ದೇಶದಿಂದಲೋ ಅಥವಾ ಹೊರ ರಾಜ್ಯದಿಂದಲೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಚಿವ ಅಶೋಕ್ ಒತ್ತಾಯಿಸಿದರು.
ಸಿದ್ದರಾಮಯ್ಯಗೆ ತಿರುಗೇಟು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಿರುವುದು ಕೇಂದ್ರದ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ. ಅವರು ಕಾನೂನು ಪ್ರಕಾರ ರಾಜ್ಯಕ್ಕೆ ಬರುತ್ತಿದ್ದಾರೆ. ಮೋದಿಯವರು ಎಲ್ಲೆಲ್ಲಿ ಬರುತ್ತಾರೋ, ಅಲ್ಲಿ ರಾಹುಲ್ ಗಾಂಧಿಯನ್ನು ಕರೆಸಬಹುದಲ್ಲಾ?. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಚುನಾವಣೆ ಮಟಾಶ್ ಆಗಿದೆ. ಈಗ ಗಡ್ಡ ಬಿಟ್ಟುಕೊಂಡು ಏನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕುರ್ಚಿಗಾಗಿ ಟೆವಲ್ ಹಾಕಿರುವ ಇಬ್ಬರು ನಾಯಕರು: ಸಿದ್ದರಾಮಯ್ಯನವರು ನಾನೇ ನಾಯಕ ಅಂತಾರೆ, ಡಿ ಕೆ ಶಿವಕುಮಾರ್ ಹೋಗುವ ಕಡೆ ನನಗೆ ಒಂದೇ ಒಂದು ಅವಕಾಶ ಕೊಡಿ ಅಂತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ನಾಯಕತ್ವ ಇಲ್ಲ. ಇಬ್ಬರು ನಾಯಕರೂ ಸಹ ಕುರ್ಚಿಗಾಗಿ ಟವೆಲ್ ಹಾಕಿದ್ದಾರೆ. ಆದರೆ ಇಬ್ಬರಿಗೂ ಸಿಗುವುದಿಲ್ಲ. ಅದು ಬೇರೆಯವರಿಗೇ ಸಿಗುವುದು ಎಂದು ಲೇವಡಿ ಮಾಡಿದರು.
ವೈರಲ್ ವಿಡಿಯೋದಲ್ಲಿರೋದೇನು?.. ಪ್ರಜಾ ಧ್ವನಿ ಯಾತ್ರೆ ನಡೆಸುತ್ತಿರುವ ಸಿದ್ದರಾಮಯ್ಯ ಮತ್ತವರ ತಂಡ ಉತ್ತರ ಕರ್ನಾಟಕ ಭಾಗದಲ್ಲಿ ಬ್ಯುಸಿ ಇದೆ. ಈ ವೇಳೆ ಬಸ್ನಲ್ಲಿ ಎಲ್ಲರೂ ತೆರಳುತ್ತಿದ್ದ ಸಂದರ್ಭದಲ್ಲಿ 'ಅಲ್ಲಿ ಅದೇ ಕ್ಷೇತ್ರದವರು ಇರಲ್ಲ, ಬೇರೆ ಬೇರೆ ಕ್ಷೇತ್ರದವರೂ ಇರುತ್ತಾರೆ. ಎಲೆಕ್ಷನ್ ಇರೋದರಿಂದ ಜನ ಸೇರಿಸ್ತಾರೆ ಅವ್ರು, 500 ರೂಪಾಯಿ ಕೊಟ್ಟು ಕರೆದುಕೊಂಡ ಬರೋದು ಪ್ರತಿಯೊಬ್ಬರನ್ನು' ಅಂತಾ ಸಿದ್ದರಾಮಯ್ಯನವರು ಹೇಳುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ. ಆದ್ರೆ ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಯಾರ ಬಗ್ಗೆ ಮಾತನಾಡಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಇದನ್ನೂಓದಿ:ಶಿವಾಜಿ ಪ್ರತಿಮೆ ಲೋಕಾರ್ಪಣೆ: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಸಿಎಂ ಭರವಸೆ