ಬೆಂಗಳೂರು : ವಿಧಾನಸಭೆ ಉಪ ಚುನಾವಣೆ ನಡೆಯುವ ಎರಡು ಕ್ಷೇತ್ರಗಳಿಗೂ ನಾಮಪತ್ರ ಸಲ್ಲಿಕೆ ಸಂದರ್ಭ ಉಪಸ್ಥಿತನಿರುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅ. 14 ರಂದು ರಾಜರಾಜೇಶ್ವರಿ ನಗರ ಹಾಗೂ 15ರಂದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆಗಲಿದೆ. ಈ ಸಂದರ್ಭ ತೆರಳುತ್ತೇನೆ. ಅಲ್ಲದೆ ಎರಡೂ ಕ್ಷೇತ್ರಗಳಲ್ಲಿ ಪ್ರಚಾರವನ್ನು ನಡೆಸುತ್ತೇನೆ. ಪ್ರತಿ ವಾರ್ಡ್ನಿಂದ ಒಂದೊಂದು ಟೀಮ್ ಮಾಡಲಾಗಿದೆ. ಪ್ರತಿ ಬೂತ್ಗೂ ಜವಾಬ್ದಾರಿ ವಹಿಸಲಾಗಿದೆ ಎಂದರು.
ಆರ್.ಆರ್.ನಗರದ 600ಕ್ಕೂ ಹೆಚ್ಚು ಬೂತ್ಗಳಿಗೂ ಜವಾಬ್ದಾರಿ ವಹಿಸಲಾಗಿದೆ. ಶಾಸಕರು, ಮಾಜಿ ಸಚಿವರು ಪ್ರತಿ ತಂಡದಲ್ಲಿ ಇರಲಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ಲೋಕಲ್ ಬಿಜೆಪಿಯವರು ಅಭ್ಯರ್ಥಿಗಳನ್ನು ಒಪ್ಪಲು ಇಷ್ಟ ಇಲ್ಲ. ಹಾಗಾಗಿ ಅವರ ಪಕ್ಷದಲ್ಲಿ ಸಂಘರ್ಷ ನಡೆಯುತ್ತಿದೆ. ವಿದ್ಯೆ ಯಾವಾಗಬೇಕಾದರೂ ಕಲಿಸಬಹುದು, ಜೀವ ಮುಖ್ಯ. ನಾನು 4ನೇ ತರಗತಿಯವರೆಗೆ ಓದಲೇ ಇಲ್ಲ, ನಾನೇನು ದಡ್ಡನಾ? ಹದಿಮೂರು ಬಜೆಟ್ ಮಂಡಿಸಿದೆ ಎಂದರು.
'ಮತದಾರರಿಗೆ ತಿಳುವಳಿಕೆಯಿದೆ'
ಜಾತಿ ಅಸ್ತ್ರ ಪ್ರಯೋಗಿಸಿದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದು, ಮತದಾರರು ಕುಮಾರಸ್ವಾಮಿ ತಿಳಿದುಕೊಂಡಷ್ಟು ದಡ್ಡರಲ್ಲ. ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಫಾಲೋ ಮಾಡಲ್ಲ, ಬೇರೆ ಲೀಡರ್ನೂ ಫಾಲೋ ಮಾಡಲ್ಲ. ಯಾರು ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ, ಮತದಾರರಿಗೆ ಅವರದೇ ಆದ ತಿಳುವಳಿಕೆ ಇದೆ. ಚುನಾವಣೆ ಬಂದಾಗ ಕುಮಾರಸ್ವಾಮಿಗೆ ಜಾತಿ ನೆನಪಾಗುತ್ತದೆ. ಇದೆಲ್ಲ ಪರಿಣಾಮ ಬೀರೋಲ್ಲ. ಪರಿಣಾಮ ಬೀರೋದಾದರೆ ಕುಮಾರಸ್ವಾಮಿ ಮಗ ಯಾಕೆ ಮಂಡ್ಯದಲ್ಲಿ ಸೋಲುತ್ತಿದ್ದರು? ಎಂದು ಪ್ರಶ್ನೆ ಹಾಕಿದರು.