ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವ ಬಗ್ಗೆ ಬೆಳಗಿನ ಜಾವ ಐದು ಗಂಟೆಗೆ ಕನಸು ಬಿದ್ದಿರಬೇಕು ಎಂದು ಎಸ್ ಟಿ ಸೋಮಶೇಖರ್ ಟಾಂಗ್ ನೀಡಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಅವರು, ಅವರಿಗೆ ಸಿಎಂ ಆಗುವ ಬಗ್ಗೆ ಬೆಳಗ್ಗೆ ಐದು ಗಂಟೆಗೆ ಕನಸು ಬಿದ್ದಿರಬೇಕು. ಅದಕ್ಕೆ ಹಾಗೆ ಮಾತನಾಡುತ್ತಿದ್ದಾರೆ. ಅವರು ಕನಸಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿರಬೇಕು. ಅವರ ಕೈಯಲ್ಲಿ ಸೋಲಿಸಲು ಆಗಲ್ಲ. ಗೆಲ್ಲಿಸಲೂ ಆಗಲ್ಲ. ಸೋಲಿಸುವುದು, ಗೆಲ್ಲಿಸುವುದು ಮತದಾರರ ಕೈಯಲ್ಲಿದೆ ಎಂದು ತಿರುಗೇಟು ನೀಡಿದರು.
ಮೈತ್ರಿ ಪತನ ವೇಳೆ ಕಾಂಗ್ರೆಸ್ ನಾಯಕರ ಬಗ್ಗೆ ಕುಮಾರಸ್ವಾಮಿ ಬಹಳ ಹೀನಾಯವಾಗಿ ಮಾತನಾಡಿದ್ದರು. ಹಾಗಿದ್ದರೂ ಕಾಂಗ್ರೆಸ್ ಅವರ ಜೊತೆ ಒಪ್ಪಂದ ಮಾಡಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ನೇರವಾಗಿಯೇ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದರು. ಆಗಲೇ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಹರಕೆಯ ಕುರಿ ಮಾಡಿದ್ದಾರೆ. ಈ ರೀತಿ ಒಳ ಒಪ್ಪಂದ ಮಾಡಿಕೊಳ್ಳುವುದೆ ಆಗಿದ್ದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಏಕೆ ಕಣಕ್ಕೆ ಇಳಿಸಬೇಕಿತ್ತು. ಅವರು ಏನೇ ಮಾಡಿದರೂ ಜನ ನಮ್ಮ ಕೈ ಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಒಳ ಒಪ್ಪಂದ ಆಗಿರುವ ಬಗ್ಗೆ ನನ್ನ ಬಳಿ ಸೂಕ್ತ ಸಾಕ್ಷವಿದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ನಾಯಕರೊಂದಿಗೆ ಮಾತನಾಡಿರುವ ಮಾಹಿತಿ ನಮ್ಮ ಬಳಿ ಇದೆ ಎಂದರು.