ಬೆಂಗಳೂರು: ಬೆಳಗ್ಗೆಯಿಂದ ಕಾಯುತ್ತಿದ್ದ ತಮ್ಮ ಅಭಿಮಾನಿಗಳನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನದ ನಂತರ ಕೊನೆಗೂ ಭೇಟಿ ಮಾಡಿ ಮಾತುಕತೆ ನಡೆಸಿದರು. ಊಟದ ಬಳಿಕ ಮತ್ತೆ ಸಿದ್ದರಾಮಯ್ಯ ನಿವಾಸಕ್ಕೆ ಮರಳಿ ಬಂದ ಅಭಿಮಾನಿಗಳು ಬದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಲು ತೀರ್ಮಾನಿಸಿದರು. ಬದಾಮಿಯಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾವು ಅವರನ್ನು ಭೇಟಿಯಾಗದೇ ಯಾವುದೇ ಕಾರಣಕ್ಕೂ ತೆರಳುವುದಿಲ್ಲ ಎಂದು ದುಂಬಾಲು ಬಿದ್ದು ಕುಳಿತರು. ಮಧ್ಯಾಹ್ನ ವಿಧಾನಸೌಧದಿಂದ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳನ್ನು ಭೇಟಿಯಾದರು.
ಭೋಜನ ಮುಗಿಸಿ ಕಾರ್ಯಕರ್ತರನ್ನ ಭೇಟಿ ಮಾಡಿದ ಸಿದ್ದರಾಮಯ್ಯ, ಎರಡು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನ ಭೇಟಿಯಾದರು. 50ಕ್ಕೂ ಹೆಚ್ಚು ಟ್ರ್ಯಾಕ್ಸ್ ಮೂಲಕ ಬಂದ ಜನರು ಸಿದ್ದರಾಮಯ್ಯ ಪೋಸ್ಟರ್ ಹಿಡಿದು ಕುಳಿತುಕೊಂಡಿದ್ದರು. ಜನರ ಅಹವಾಲು ಆಲಿಸಲು ಆಗಮಿಸಿದ ಅವರು, ಇದು ಕೊನೆ ಚುನಾವಣೆಯಾಗಿದ್ದರಿಂದ ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ. ಹೀಗಾಗಿ ಹತ್ತಿರ ಇರುವ ಜಾಗಕ್ಕೆ ಹೋಗೋಣ ಅಂದುಕೊಂಡಿದ್ದೀನಿ.
ಹೈಕಮಾಂಡ್ ಎಲ್ಲಿ ಹೇಳುತ್ತೋ ಅಲ್ಲಿ ನಿಂತ್ಕೊಂತಿನಿ. ಒಂದು ವೇಳೆ ನಾನು ಬದಾಮಿಯಲ್ಲಿ ನಿಲ್ಲದಿದ್ದರೂ ನಾನು ಬದಾಮಿ ಶಾಸಕನೇ, ತಪ್ಪು ತಿಳಿದುಕೊಳ್ಳಬೇಡಿ. ಬದಾಮಿ ಜನರ ರುಣ ತೀರಿಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬದಾಮಿಯನ್ನು ನನ್ನ ಕ್ಷೇತ್ರ ಅಂತಲೇ ಅಭಿವೃದ್ಧಿ ಮಾಡುತ್ತೇನೆ. ನಿಮ್ಮ ಜೊತೆಗೆ ವಾದ ವಿವಾದ ಮಾಡುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದರ ಪ್ರಕಾರ ನಡೆದುಕೊಳ್ತೇನೆ ಎಂದರು.
ಎಲ್ರೂ ಊಟ ಮಾಡಿದ್ರಾ? ಊಟ ಮಾಡದಿದ್ದರೆ ಹೇಳಿ, ಮಾಡ್ಸೋಣ ಎಂದು ಅಭಿಮಾನಿಗಳ ಊಟೋಪಚಾರ ವಿಚಾರಿಸಿದರು. ನಿಮ್ಮ ಅಭಿಮಾನಕ್ಕೆ ಪ್ರೀತಿಗೆ ಎಲ್ಲದಕ್ಕೂ ಧನ್ಯವಾದಗಳು. ನಾನು ಬೆಳಗ್ಗೆ ಕೂಡ ಮಾತನಾಡಿದೆ. ಆದರೆ, ಕೇಳೋ ಪರಿಸ್ಥಿತಿಯಲ್ಲಿ ನೀವು ಇರಲಿಲ್ಲ. ನಾನು ಅರ್ಜಿ ಹಾಕಿರೋದು ಕಾಂಗ್ರೆಸ್ಗೆ. ಬದಾಮಿಯಲ್ಲಿ ಹೈಕಮಾಂಡ್ ಹೇಳಿದರೆ ನಿಂತ್ಕೋತಿನಿ. ವರುಣ ಕ್ಷೇತ್ರದಲ್ಲಿಯೂ ಜನ ಕರೆಯುತ್ತಿದ್ದಾರೆ. ಅಲ್ಲಿ ಹೇಳಿದರೆ ಅಲ್ಲಿ, ಕೋಲಾರದಲ್ಲಿ ಹೇಳಿದರೆ ಕೋಲಾರದಲ್ಲಿ. ಬದಾಮಿ ಕ್ಷೇತ್ರದ ಜನ ಬಹಳ ಒಳ್ಳೆ ಜನ, ದಯವಿಟ್ಟು ಕ್ಷಮಿಸಬೇಕು.
ದಿನ ನಿತ್ಯ ನಿಮ್ಮ ಕಷ್ಟ ಸುಖ ಕೇಳಕ್ಕಾಗಲ್ಲ. ಮೈಸೂರಿನಿಂದ ಬಂದವನಿಗೆ ನೀವು ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ಋಣ ತೀರಿಸುವುದಕ್ಕೆ ಆಗುವುದಿಲ್ಲ. ನಿಮ್ಮ ಅಭಿಪ್ರಾಯ ನಾನು ಹೈಕಮಾಂಡ್ಗೆ ತಿಳಿಸುತ್ತೇನೆ. 24 ರಿಂದ 26 ರವರೆಗೆ ಅಧಿವೇಶನ ಇದೆ. ಸ್ಕ್ರೀನಿಂಗ್ ಕಮಿಟಿಯಲ್ಲೂ ನಿಮ್ಮ ಒತ್ತಾಯದ ಬಗ್ಗೆ ಹೇಳುವೆ. ಅಬ್ಸರ್ವರ್ಗಳೂ ಕೂಡ ನಿಮ್ಮ ಒತ್ತಡ ಗಮನಿಸಿದ್ದಾರೆ. ಇದೇ ಕೊನೆ ಚುನಾವಣೆಯಾಗಿದ್ದರಿಂದ ನನ್ನ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಮೇ ಮೊದಲ ವಾರ ಅಥವಾ ಏಪ್ರಿಲ್ ಕೊನೆ ವಾರ ಇಲೆಕ್ಷನ್ ಆಗಬಹುದು. ಈ ಮುನ್ನ ಹೇಳಿದಂತೆ ನಿಮ್ಮ ಅಭಿಪ್ರಾಯ ಕೂಡ ಸ್ಕ್ರೀನಿಂಗ್ ಕಮಿಟಿ ಮುಂದೆ ಇಡುವೆ. ಪದೇ ಪದೇ ಬಂದು ಇಲ್ಲಿ ಒತ್ತಾಯ ಮಾಡಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಂಡ್ಯದಲ್ಲೂ ಬದಲಾವಣೆ, ಕರ್ನಾಟಕದಲ್ಲಿ ಬಿಜೆಪಿ ಗೆಲ್ಲೋದು ಖಚಿತ: ಅಮಿತ್ ಶಾ ವಿಶ್ವಾಸ